ಜಿಲ್ಲೆ

ಕರೊನಾ ನೆಪದಲ್ಲಿ ಎಕ್ಸಾಂ ಬರೆಯದೇ ಪಾಸ್​ ಆಗುವ ಆಸೆಯಲ್ಲಿದ್ದ ಪೌರ ಕಾರ್ಮಿಕ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ!

arunakunigal

ತಿಪಟೂರು: ಕರೊನಾ ಬಂದ್ರೆ ಎಕ್ಸಾಂ ಬರೆಯದೇ ಪಾಸಾಗುವ ಆಸೆಯಲ್ಲಿ ಖಾಸಗಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡಿದ್ದ ಪೌರ ಕಾರ್ಮಿಕನೊಬ್ಬ ಮಾಡಬಾರದ್ದು ಮಾಡಿದ್ದಾನೆ. ತನ್ನ ಪರವಾಗಿ ಬೇರೊಬ್ಬನನ್ನು ಕಳಿಸಿ ಪರೀಕ್ಷೆ ಬರೆಸಿದ್ದಾನೆ. ಇಂತಹ ಪ್ರಕರಣ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಸ್ವಕ್ಷೇತ್ರ ತಿಪಟೂರಿನಲ್ಲಿ ಬಯಲಾಗಿದೆ.

ತಿಪಟೂರು ನಗರಸಭೆಯ ಕಾಯಂ ನೌಕರ ಎಂ.ಮಂಜುನಾಥ್​ ಕರೊನಾ ಬಂದರೆ ಪರೀಕ್ಷೆ ನಡೆಯದೆ ಪಾಸಾಗಬಹುದು ಎಂಬ ಉದ್ದೇಶದಿಂದ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದ ಎನ್ನಲಾಗಿದೆ. ಆದರೆ ಪರೀಕ್ಷೆ ರದ್ದಾಗಲಿಲ್ಲ. ಪರೀಕ್ಷೆ ಬರೆಯುವ ಸಂದರ್ಭ ಬಂತು. ಸೋಮವಾರ ಎಸ್ಸೆಸ್ಸೆಲ್ಸಿ ವಿಜ್ಞಾನ ಪರೀಕ್ಷೆಗೆ ತನ್ನ ಬದಲಾಗಿ ಸಂಬಂಧಿ ಮುರಳೀಧರ್​ ಎಂಬಾತನನ್ನು ಟಾಗೂರ್​ ಶಾಲೆಯ ಪರೀಕ್ಷಾ ಕೊಠಡಿ 5ಕ್ಕೆ ಕಳಿಸಿದ್ದ. ಕೊಠಡಿ ಮೇಲ್ವಿಚಾರಕ ನರಸಿಂಹಮೂರ್ತಿ ಅವರು ಅನುಮಾನಗೊಂಡು ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಈ ಸಂದರ್ಭದಲ್ಲಿ ನಕಲಿ ಅಭ್ಯರ್ಥಿಯನ್ನು ಬಿಟ್ಟು ಕಳುಹಿಸಿದ್ದರು ಎನ್ನಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾದ ಕೂಡಲೇ ಪರೀಕ್ಷಾ ಕೇಂದ್ರದ ಅಧೀಕ್ಷಕ ಡಿ.ಎಸ್​.ಶಿವಶಂಕರ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಲಾಖೆ ಬಡ್ತಿ ಸಂದರ್ಭದಲ್ಲಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ಎಸ್ಸೆಸ್ಸೆಲ್ಸಿ ಪಾಸ್​ ಆಗಬೇಕೆಂಬ ಆಸೆಗೆ ತೆಗೆದುಕೊಂಡಿದ್ದ ಪರೀಕ್ಷೆಯನ್ನು ಸ್ವಂತವಾಗಿ ಬರೆಯಲಾಗದೆ ಬೇರೊಬ್ಬನನ್ನು ಕಳಿಸಿರುವುದು ಬಯಲಾಗಿದೆ. ವಿಜ್ಞಾನ ಪರೀಕ್ಷೆ ಸಂದರ್ಭದಲ್ಲಿ ನಕಲಿ ಅಭ್ಯರ್ಥಿ ಸಿಕ್ಕಿಬಿದ್ದಿದ್ದು ಈ ಹಿಂದಿನ ಐದು ವಿಷಯಗಳ ಪರೀಕ್ಷೆಗಳಲ್ಲಿಯೂ ನಕಲಿ ವಿದ್ಯಾರ್ಥಿಯೇ ಪರೀಕ್ಷೆ ಬರೆದಿರುವ ಅನುಮಾನ ಮೂಡಿದ್ದು, ತನಿಖೆಯಿಂದ ಸತ್ಯ ಬಯಲಾಗಬೇಕಿದೆ. ಶಿಕ್ಷಣ ಸಚಿವರ ತವರಿನಲ್ಲೇ ಇಂತಹ ಪ್ರಕರಣ ನಡೆದಿರುವುದು ಇಲಾಖೆಗೆ ಮುಜುಗರ ತಂದಿದ್ದು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕಿದೆ.