ಬೆಂಗಳೂರು: ರಾಜ್ಯದ ಕೆಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ವಿವಿಧೆಡೆ ಒಟ್ಟು 7 ಜನರು ಸಿಡಿಲಿಗೆ ಬಲಿಯಾದ ಘಟನೆ ಮಂಗಳವಾರ ಸಂಭವಿಸಿದೆ. ವಿಜಯನಗರ ಜಿಲ್ಲೆಯಲ್ಲಿಯೇ ನಾಲ್ವರು ಸಿಡಿಲಿಗೆ ಬಲಿಯಾಗಿದ್ದರೆ, ದಾವಣಗೆರೆಯಲ್ಲಿ ಇಬ್ಬರು, ಯಾದಗಿರಿಯಲ್ಲಿ ಓರ್ವ ಮಹಿಳೆ ಸತ್ತಿದ್ದಾರೆ.
ವಿಜಯಪುರದ ಜರ್ಮಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹರವದಿಯ ರಾಜಶೇಖರ(33) ತಾಲೂಕಿನ ಸೂಲದಹಳ್ಳಿಯಿಂದ ಕ್ಯಾಸನಕೆರೆ ಜರ್ಮಲಿ ರಸ್ತೆಯಲ್ಲಿ ಹೋಗುತ್ತಿರುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇವರ ಜತೆಯಲ್ಲಿದ್ದ ವ್ಯಕ್ತಿಗೆ ಗಾಯವಾಗಿದೆ. ನೆಲಬೊಮ್ಮನಹಳ್ಳಿ ಹೊರವಲಯದ ಹೊಲದಲ್ಲಿ ಕುರಿಮೇಯಿಸಲು ಹೋಗಿದ್ದ ಚಿನ್ನಾಪುರಿ (40) ಹಾಗೂ ವೀರಣ್ಣ (50) ಇಬ್ಬರೂ ಮಳೆ ಬರುತ್ತಿದ್ದರಿಂದ ಮರದಡಿ ನಿಂತಿದ್ದರು. ಅವರಿಬ್ಬರಿಗೂ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಎಂಬಿ ಅಯ್ಯನಹಳ್ಳಿಯ ಪತ್ರೆಪ್ಪ(43) ಮಳೆ ಬರುತ್ತಿದೆ ಎಂದು ಮಾಳಿಗೆಯ ಬಾದಾಳ ಮುಚ್ಚಲು ಹೋದಾಗ ಆತನಿಗೂ ಸಿಡಿಲು ಬಡಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಮಹಾಬಲೇಶ್ವರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ದಾವಣಗೆರೆ ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಕೆರೆ ಏರಿ ಬಳಿ ಸಿಡಿಲು ಬಡಿದು ಗ್ರಾಮದ ರವಿಕುಮಾರ್ (32) ಮತ್ತು ರಮೇಶ ಅಲಿಯಾಸ್ ರಾಮ(30) ಮೃತಪಟ್ಟಿದ್ದಾರೆ. ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ಹೊರವಲಯದಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಜಮೀನಿನ ಕೂಲಿ ಕೆಲಸಕ್ಕೆಂದು ತೆರಳಿದ್ದ ಸಿದ್ದಮ್ಮ ಸಿಡಿಲಿಗೆ ಬಲಿಯಾಗಿದ್ದಾರೆ.