ತುಮಕೂರು: ಹಾಡಹಗಲೇ ತಹಸೀಲ್ದಾರ್ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಳ್ಳತನ ಮಾಡಿ ಪರಾರಿಯಾದ ಘಟನೆ ಗುಬ್ಬಿ ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ತಹಸೀಲ್ದಾರ್ ಆರತಿ ಅವರು ಪಟ್ಟಣದ ಸರ್ಕಾರಿ ನಿವಾಸದಲ್ಲಿ ವಾಸವಿದ್ದಾರೆ. ರಜೆ ಹಿನ್ನೆಲೆ ಶನಿವಾರ ಬೆಳಗ್ಗೆ 7 ಗಂಟೆಗೆ ಸರ್ಕಾರಿ ಮನೆಗೆ ಬೀಗ ಹಾಕಿಕೊಂಡು ತಹಸೀಲ್ದಾರ್ ಆರತಿ ಅವರು ಸ್ವಗ್ರಾಮಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಹೊಡೆದು ಒಳ ನುಗ್ಗಿದ್ದಾರೆ.
ಗ್ರಾಮ ಲೆಕ್ಕಿಗರು ಯಾವುದೋ ಕೆಲಸದ ನಿಮಿತ್ತ ತಹಸೀಲ್ದಾರ್ರ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶ್ವಾನದಳ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಬ್ಬಿ ಪಟ್ಟಣ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಏನೆಲ್ಲಾ ಕಳ್ಳತನ ಆಗಿದೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.