ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು ರಾಜಕೀಯ ಮಾಡಿಕೊಂಡು ಬಂದಿದೆ. ಈಗ ಪ್ರಧಾನಮಂತ್ರಿಗೆ ಪತ್ರ ಬರೆದಿರುವುದು ಮತ್ತೊಂದು ರಾಜಕೀಯ ಸ್ಟಂಟ್. ಇದ್ಯಾವುದಕ್ಕೂ ಕೇಂದ್ರ ಮಾನ್ಯತೆ ನೀಡುವುದಿಲ್ಲವೆಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಸಿಎಂ, ಪ್ರಧಾನಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಬರೆದಿರುವ ಪತ್ರವನ್ನು ತರಿಸಿಕೊಂಡು ತಕರಾರಿನ ಅಂಶಗಳ ಬಗ್ಗೆ ತಿಳಿದುಕೊಳ್ಳುವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಜೂ.16ರಂದು ನಡುವೆ ನಿಗದಿಯಾಗಿದ್ದು, ಕರ್ನಾಟಕದ ಜತೆಗೆ ತಮಿಳುನಾಡು, ಪಾಂಡಿಚೇರಿ, ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕೇಂದ್ರಕ್ಕೆ ತಮಿಳುನಾಡು ಸರ್ಕಾರ ಪತ್ರ ಬರೆದಿರುವುದು ಕಾನೂನು ಬಾಹಿರ. ಒಕ್ಕೂಟ ವ್ಯವಸ್ಥೆಯ ವಿರುದ್ಧವಷ್ಟೇ ಅಲ್ಲ, ನಮ್ಮ ರಾಜ್ಯದ ನೀರಿನ ಹಕ್ಕು ದುರ್ಬಳಕೆ ಮಾಡಿಕೊಳ್ಳಲು ಹುನ್ನಾರ ಹೂಡಿದೆ ಎಂದು ಕಿಡಿಕಾರಿದರು.
ಈಗಾಗಲೇ ಪ್ರಾಧಿಕಾರದ 15 ಸಭೆಗಳಾಗಿದ್ದು, ತಮಿಳುನಾಡು ಪಾಲ್ಗೊಳ್ಳದೆ ಅಸಹಕಾರ ತೋರಿದೆ. ಕೇಂದ್ರೀಯ ಜಲ ಆಯೋಗವು ವಿಸ್ತೃತ ಯೋಜನಾ ವರದಿಗೆ ಒಪ್ಪಿಗೆ ನೀಡಿ, ಮುಂದಿನ ಹಂತದ ಅನುಮೋದನೆಗಾಗಿ ಪ್ರಾಧಿಕಾರಕ್ಕೆ ರವಾನಿಸಿದೆ. ಪೂರ್ವಭಾವಿ ಪ್ರಕ್ರಿಯೆಗಳು ಮುಗಿದಿರುವ ಕಾರಣ ತಮಿಳುನಾಡು ತಗಾದೆಗೆ ಯಾವುದೇ ಮಾನ್ಯತೆಯಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.