ಜಿಲ್ಲೆ

ಸಿಇಟಿ ಪರೀಕ್ಷೆಯಲ್ಲಿ ಮೊಬೈಲ್​ ಬಳಸಿ ಸಿಕ್ಕಿಬಿದ್ದ ಮೈಸೂರು ವಿದ್ಯಾರ್ಥಿ!

mahalakshmihm

ಚಿಕ್ಕಮಗಳೂರು: ಸಿಇಟಿ ಪರೀಕ್ಷೆಯಲ್ಲಿ ಮೊಬೈಲ್​ನಲ್ಲಿ ಪ್ರಶ್ನೆಗಳಿಗೆ ಉತ್ತರ ಹುಡುಕಿದ ವಿದ್ಯಾರ್ಥಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸದ್ಯ ಈತನ ವಿರುದ್ಧ ಮೇಲೆ ಎಫ್​ಐಆರ್​ ದಾಖಲಾಗಿದೆ.

ವೃತ್ತಿ ಶಿಕ್ಷಣ ಕೋರ್ಸ್ ಗಳ ಪ್ರವೇಶಾತಿಗೆ ನಡೆಸುವ ಪರೀಕ್ಷೆಯಲ್ಲಿ ಮೊಬೈಲ್​ ತೆಗೆದುಕೊಂಡು ಹೋಗಿದ್ದ ಈ ವಿದ್ಯಾರ್ಥಿ, ಪ್ರಶ್ನೆಗಳಿಗೆ ಗೂಗಲ್​ನಲ್ಲೇ ಉತ್ತರ ಹುಡುಕುತ್ತಿರುವ ವೇಳೆ ಸಿಕ್ಕಿಬಿದ್ದಿದ್ದಾನೆ.

ಬೇಲೂರು ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೊಠಡಿಯಲ್ಲಿ ರಸಾಯನ ವಿಜ್ಞಾನ ಪರೀಕ್ಷೆಯಲ್ಲಿ ಮೊಬೈಲ್ ಬಳಕೆ ಮಾಡಿದ್ದು, ಪ್ರಶ್ನೆಪತ್ರಿಕೆಯನ್ನು ಮೊಬೈಲ್​​ನಲ್ಲಿ ಫೋಟೋ ತೆಗೆದುಕೊಂಡಿದ್ದಾನೆ. ಸಿಇಟಿಯಲ್ಲಿ ಪ್ರಥಮ ಸ್ಥಾನ ಪಡೆಯಬೇಕೆಂಬ ದುರಾಲೋಚನೆಯಿಂದಾಗಿ ಮೊಬೈಲ್​ ಬಳಕೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಮೈಸೂರು ಮೂಲದ ಈ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿರುವುದನ್ನು ಗಮನಿಸಿದ ಕೊಠಡಿ ಮೇಲ್ವಿಚಾರಕರು ಅನುಮಾನಗೊಂಡು ಪರಿಶೀಲಿಸಿದಾಗ ಈತನ ಪ್ಯಾಂಟ್​​ ಜೇಬಿನಲ್ಲಿ ಮೊಬೈಲ್​ ಇರುವುದು ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದಾಗ ಸ್ಥಳಕ್ಕಾಗಮಿಸಿದ ಪೊಲೀಸರು ಈತನನ್ನು ವಶಕ್ಕೆ ಪಡೆದು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)