ಜಿಲ್ಲೆ

ಫೀಸ್ ಕಟ್ಟದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತಳಾಗುವ ಆತಂಕ: ವಿದ್ಯಾರ್ಥಿನಿ ಮನೆಗೇ ಬಂದ ಶಿಕ್ಷಣ ಸಚಿವರು

arunakunigal

ತುಮಕೂರು: ಫೀಸ್ ಕಟ್ಟದೆ ಎಸ್ಸೆಸ್ಸೆಲ್ಸಿ ಪರೀಕ್ಷೆ ವಂಚಿತಳಾಗುವನೆಂದು ಮನನೊಂದಿದ್ದ ಬಾಲಕಿಯ ಮನೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.

ಮೂಡಬಿದ್ರೆಯ ಆಳ್ವಾಸ್ ಶಾಲೆಯಲ್ಲಿ ಓದುತ್ತಿದ್ದ ಕೊರಟಗೆರೆಯ ಗ್ರೀಷ್ಮಾ ಎನ್. ನಾಯಕ್‍, ಹತ್ತನೇ ತರಗತಿ ಫೀಸ್​ ಕಟ್ಟಿ ಅಡ್ಮಿಷನ್​ ಆಗಿರಲಿಲ್ಲ. ಪರೀಕ್ಷೆ ಬರೆಯಲು ನೋಂದಣಿ ಅರ್ಜಿಯನ್ನೂ ಸಲ್ಲಿಸಿರಲಿಲ್ಲ. ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಬೇಕಾದ ದಿನಾಂಕ ಕೂಡ ಪೂರ್ಣಗೊಂಡಿರುವುದರಿಂದ ಈ ಬಾರಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಬಾಲಕಿಗೆ ತಿಳಿಸಿತ್ತು. ಇದರಿಂದಾಗಿ ಬಾಲಕಿ ಮನನೊಂದಿದ್ದಳು. ಈ ಬಗ್ಗೆ ಆತಂಕಗೊಂಡ ಪಾಲಕರು ಸುರೇಶ್ ಕುಮಾರ್​ಗೆ ಪತ್ರ ಬರೆದಿದ್ದರು. ಈ ಹಿನ್ನೆಲೆ ಶನಿವಾರ ಮುಂಜಾನೆಯೇ ಕೊರಟಗೆರೆ ತಾಲೂಕಿನ ಹನುಮಂತಾಪುರ ಗ್ರಾಮದ ಗ್ರೀಷ್ಮಾ ಮನೆಗೆ ಭೇಟಿ ನೀಡಿದ ಸಚಿವರು, ಗ್ರೀಷ್ಮಾ ನಾಯಕ್ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಸರು ನೋಂದಾಯಿಸಿದಲ್ಲವಾದ್ದರಿಂದ ನಿಯಮಾನುಸಾರ ಜುಲೈನಲ್ಲಿ ನಡೆಯಲಿರುವ ಪರೀಕ್ಷೆಗೆ ಹಾಜರಾಗಲು ಅವಕಾಶವಿಲ್ಲ. ಆಗಸ್ಟ್​ ತಿಂಗಳು ನಡೆಯಲಿರುವ ಪೂರಕ ಪರೀಕ್ಷೆಗೆ ಹಾಜರಾಗಲು ಆಕೆಗೆ ಖಚಿತ ಅವಕಾಶ ನೀಡಿ ಉತ್ತೀರ್ಣಗೊಳಿಸುವುದಲ್ಲದೇ ಪಿಯು ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಸದರಿ ವಿದ್ಯಾರ್ಥಿನಿ ಪೂರಕ ಪರೀಕ್ಷೆಗೆ ಹಾಜರಾಗಲು ಪರೀಕ್ಷೆಗೆ ಹೆಸರು ನೋಂದಾಯಿಸುವುದು, ಫಲಿತಾಂಶದ ನಂತರ ಇದೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿನಿಗೆ ಪಿಯುಸಿ ತರಗತಿಗೆ ಸೇರ್ಪಡೆಗೊಳಿಸುವುದು ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳದಲ್ಲಿ ಹಾಜರಿದ್ದ ಮಧುಗಿರಿ ಡಿಡಿಪಿಐಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

‘’ಇದೇ ಸಾಲಿನಲ್ಲಿ ನಿನ್ನನ್ನು ಪಿಯುಸಿಗೆ ಸೇರ್ಪಡೆಗೊಳಿಸುವುದು ನಾನು ಜವಾಬ್ದಾರಿ. ಮುಂದಿನ ತಿಂಗಳು ನಡೆಯಲಿರುವ ಪರೀಕ್ಷೆ ಹಾಜರಾಗಲು ಅವಕಾಶವಿರುವುದರಿಂದ ಯಾವುದೇ ಕಾರಣಕ್ಕೂ ಮನಸ್ಸಿಗೆ ಬೇಸರ ಮಾಡಿಕೊಳ್ಳದೇ ಉತ್ತಮ ಅಂಕಗಳನ್ನು ಪಡೆಯಲು ಶ್ರಮವಹಿಸಿ ಅಭ್ಯಾಸದತ್ತ ಗಮನ ಹರಿಸಬೇಕು. ಪರೀಕ್ಷೆಗೆ ಚೆನ್ನಾಗಿ ಓದುವುದಷ್ಟೇ ನೀನು ಮಾಡಬೇಕಾದ ಕೆಲಸ” ಎಂದು ಸುರೇಶ್ ಕುಮಾರ್ ವಿದ್ಯಾರ್ಥಿನಿಗೆ ಕಿವಿಮಾತು ಹೇಳಿ ಅವಳಲ್ಲಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಪೋಷಕರು ಸಚಿವರಿಗೆ ಕೃತಜ್ಞಗೆ ಸಲ್ಲಿಸಿದರು.

ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರಗೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ಗ್ರೀಷ್ಮಾ 9ನೇ ತರಗತಿ ಪಾಸಾದ ನಂತರ ಅವಳು ಶಾಲೆಗೆ ಹಾಜರಾಗಿಲ್ಲ. ಹಾಗೆಯೇ 10ನೇ ತರಗತಿ ಪರೀಕ್ಷೆ ನೋಂದಾಯಿಸಿಲ್ಲ. ಹಾಗಾಗಿ ಅವಳಿಗೆ ಜುಲೈನಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶವಾಗಿಲ್ಲ. ಆಗಸ್ಟ್​ನಲ್ಲಿ ನಡೆಯಲಿರುವ ಪೂರಕ ಪರೀಕ್ಷೆಗೆ ಹೆಸರು ನೋಂದಾಯಿಸಿ ಗ್ರೀಷ್ಮಾಗೆ ಅವಕಾಶ ನೀಡಲಾಗುವುದು ಎಂದರು.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಭಾಗದ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರೂ, ಕೊನೆ ಕ್ಷಣದವರೆಗೂ ಮಂಡಳಿಗೆ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ಅವರ ಭಾವಚಿತ್ರವನ್ನು ನೀಡಿಲ್ಲ. ಭಾವಚಿತ್ರ ಒದಗಿಸುವುದು ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದ್ದು, ಫೋಟೋ ಒದಗಿಸದೇ ಇರುವುದರಿಂದ ಅವರಿಗೆ ಪ್ರವೇಶ ಪತ್ರಗಳು ಲಭ್ಯವಾಗಿಲ್ಲ. ಆ ಇಬ್ಬರೂ ವಿದ್ಯಾರ್ಥಿಗಳೊಂದಿಗೆ ಮತ್ತು ಸ್ಥಳೀಯ ಮುಖ್ಯೋಪಾಧ್ಯಾಯರೊಂದಿಗೆ ಮಾತನಾಡಿ ಎಲ್ಲ ವಿಷಯಗಳನ್ನೂ ಅರಿತುಕೊಂಡಿದ್ದೇನೆ. ಆ ಇಬ್ಬರು ವಿದ್ಯಾರ್ಥಿಗಳಿಗೂ ಪೂರಕ ಪರೀಕ್ಷೆಯಲ್ಲಿ ಅವಕಾಶ ಮಾಡಿಕೊಡಲಾಗುವುದು. ಪೂರಕ ಪರೀಕ್ಷೆಯಲ್ಲಿ ಭಾಗವಹಿಸಿದ ಮಕ್ಕಳಿಗೂ ಜುಲೈ ಪರೀಕ್ಷೆಯಂತೆಯೇ ಹೊಸ ವಿದ್ಯಾರ್ಥಿಗಳಿಗೆ ನೀಡುವ ಅಂಕಪಟ್ಟಿಯನ್ನೇ ನೀಡಲಾಗುವುದು ಎಂದೂ ಸಚಿವರು ತಿಳಿಸಿದರು.