| ಗಂಗಾಧರ್ ಬೈರಾಪಟ್ಟಣ ರಾಮನಗರ
ತುಮಕೂರಿನ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಆಗಿಸುವ ನಿಟ್ಟಿನಲ್ಲಿ ಬಿಜೆಪಿ ಕಸರತ್ತು ಆರಂಭಿಸಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದವರ ಒಳ ಸಂಚಿನ ಕಾರಣದಿಂದಾಗಿಯೇ ತುಮಕೂರು ಕ್ಷೇತ್ರದಿಂದ ಟಿಕೆಟ್ ತಪ್ಪಿ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದ ಮುದ್ದಹನುಮೇಗೌಡ, ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದು ಘೋಷಿಸಿದ್ದಾರೆ, ಕಾಂಗ್ರೆಸ್ನಿಂದ ಟಿಕೆಟ್ ಸಿಕ್ಕೇ ಸಿಗುತ್ತೆ ಎಂಬ ಅಚಲ ಭರವಸೆ ಇವರದ್ದು. ಅತ್ತ, ಉತ್ತಮ ಚಾರಿತ್ರ್ಯ ಹೊಂದಿರುವ ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಸೆಳೆದರೆ ಸಾಕಷ್ಟು ಲಾಭ ಎಂಬುದನ್ನ ಮನಗಂಡ ಬಿಜೆಪಿ ರಾಜ್ಯ ನಾಯಕರು ಎಸ್ಪಿಎಂ ಅವರ ಸಂಪರ್ಕ ಸಾಧಿಸುವಲ್ಲಿ ಯಶಸ್ವಿ ಆಗಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಸಭೆಗೆ ಪ್ರಚಾರ: ಮುದ್ದಹನುಮೇಗೌಡರು ಕುಣಿಗಲ್ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರು. ಇವರಿಗೆ ಮತ್ತೆ ವಿಧಾನಸಭೆ ಚುನಾವಣೆಯಲ್ಲಿ ಕುಣಿಗಲ್ನಿಂದಲೇ ಸ್ಪರ್ಧೆ ಮಾಡಬೇಕು ಎನ್ನುವ ಹಂಬಲವಿದೆ. ಈ ಕಾರಣಕ್ಕಾಗಿಯೇ ಈಗಾಗಲೇ ಪ್ರಚಾರವನ್ನೂ ಆರಂಭಿಸಿದ್ದಾರೆ. ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಸ್ಪರ್ಧೆ ಮಾಡಬೇಕು ಎನ್ನುವ ಸಲುವಾಗಿಯೇ ಕಾಂಗ್ರೆಸ್ ನಾಯಕರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಎಸ್ಪಿಎಂ ಮಾಡಿದ್ದಾರೆ. ಆದರೆ, ಇವರ ಆಸೆ ಈಡೇರುವ ಲಕ್ಷಣಗಳು ಬಹುತೇಕ ಕ್ಷೀಣಿಸಿವೆ. ಕಾರಣ ಹಾಲಿ ಶಾಸಕ ಡಾ. ಎಚ್.ಡಿ. ರಂಗನಾಥ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹತ್ತಿರದ ಸಂಬಂಧಿ. ರಂಗನಾಥ್ ಬೆನ್ನಿಗೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಸಹ ನಿಂತಿದ್ದಾರೆ. ಇದರ ಹೊರತಾಗಿಯೂ ಮುಂದಿನ ಚುನಾವಣೆಯಲ್ಲಿ ಕುಣಿಗಲ್ನಿಂದ ಕಣಕ್ಕೆ ಇಳಿಯಲೇಬೇಕು ಎಂದು ಸಂಕಲ್ಪ ಮಾಡಿರುವ ಎಸ್ಪಿಎಂ ಭರದ ಸಿದ್ಧತೆ ಮಾಡುತ್ತಿದ್ದಾರೆ.
ಬಿಜೆಪಿ ಗಾಳ?: ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ನಿಂದ ಮುದ್ದಹನುಮೇಗೌಡರಿಗೆ ಟಿಕೆಟ್ ದೊರೆಯುವುದು ಅನುಮಾನ ಎನ್ನುವುದನ್ನು ಅರಿತ ಬಿಜೆಪಿ ನಾಯಕರು, ಎಸ್ಪಿಎಂ ಅವರನ್ನು ಸಂಪರ್ಕಿಸಿ ಬಿಜೆಪಿಗೆ ಸೆಳೆಯುವ ಯತ್ನ ಮಾಡಿದ್ದಾರೆ. ಕುಣಿಗಲ್ನಿಂದ ಬಿಜೆಪಿ ಅಭ್ಯರ್ಥಿ ಆಗಿ ಕಣಕ್ಕೆ ಇಳಿಸುವುದು ಹಾಗೂ ಒಂದು ವೇಳೆ ಈ ಚುನಾವಣೆಯಲ್ಲಿ ಪರಾಭವಗೊಂಡರೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ಷರತ್ತುಗಳನ್ನು ಹಾಕಲಾಗಿದೆ ಎಂದು ತಿಳಿದು ಬಂದಿದೆ. ಎಸ್ಪಿಎಂಗೆ ಮಣೆ ಹಾಕಿದರೆ, ಅತ್ತ ಮೂರು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡ ಡಿ.ಕೃಷ್ಣಕುಮಾರ್ ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಲಿದೆ.
ಟಿಕೆಟ್ ತಪ್ಪಲೇನು ಕಾರಣ?: ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಹಾಲಿ ಸಂಸದರಾಗಿದ್ದರೂ ಅವರಿಗೆ ಪಕ್ಷದ ಟಿಕೆಟ್ ನಿರಾಕರಿಸಲಾಗಿತ್ತು. ಅಂದಿನ ಮೈತ್ರಿ ಸರ್ಕಾರ ಎಚ್.ಡಿ. ದೇವೇಗೌಡ ಅವರನ್ನು ಕಣಕ್ಕೆ ಇಳಿಸಿತ್ತು. ಮೇಲ್ನೋಟಕ್ಕೆ ಇದು ಮೈತ್ರಿ ಧರ್ಮ ಪಾಲನೆ ಆದರೂ, ಎಸ್ಪಿಎಂ ಅವರಿಗೆ ಟಿಕೆಟ್ ತಪ್ಪಿಸಲೇಬೇಕು ಎಂದು ಮಾಡಿದ ತಂತ್ರ ಎನ್ನುವುದು ಎಸ್ಪಿಎಂ ಅಭಿಮಾನಿಗಳ ಆರೋಪ. ಕ್ಲೀನ್ ಇಮೇಜ್ ಹೊಂದಿರುವ ಮುದ್ದಹನುಮೇಗೌಡ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೂ ಕಣ್ಣಿಟ್ಟಿದ್ದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಮುದ್ದಹನುಮೇಗೌಡರು ಮತ್ತೆ ಲೋಕಸಭೆ ಪ್ರವೇಶ ಮಾಡಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ಕಠಿಣವಾಗಬಹುದು ಎನ್ನುವ ಕಾರಣಕ್ಕಾಗಿಯೇ ಡಿಕೆಶಿ ಸಹೋದರರು ಟಿಕೆಟ್ ತಪ್ಪಿಸಿದರು ಎನ್ನಲಾಗುತ್ತಿದೆ. ನಂತರ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಇವರಿಗೆ ಟಿಕೆಟ್ ನೀಡುವಲ್ಲಿ ಪಕ್ಷ ವಿಲವಾಗಿತ್ತು.