ಹುಬ್ಬಳ್ಳಿ: ಪ್ರತಿ ಮಹಿಳೆಯಲ್ಲಿ ವಿಶೇಷ ಶಕ್ತಿ ಇದೆ. ಕುಟುಂಬದ ಆರೋಗ್ಯದ ಹೊಣೆ ನಿಭಾಯಿಸುವ ಮಹತ್ತರ ಜವಾಬ್ದಾರಿ ಮಹಿಳೆಯರ ಮೇಲಿದೆ. ಇದರ ಜತೆಗೆ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಉದ್ಯೋಗ ಮಾಡುವ ಮೂಲಕ ಮನೆಯ ಆರ್ಥಿಕ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಮಹಿಳೆಯಾಗಿ ಹುಟ್ಟಿದ್ದಕ್ಕೆ ಖುಷಿ ಪಡಿ ಎಂದು ವಿಆರ್ಎಲ್ ಮೀಡಿಯಾ ಪ್ರೈ.ಲಿ. ನಿರ್ದೇಶಕರಾದ ಶ್ರೀಮತಿ ವಾಣಿ ಆನಂದ ಸಂಕೇಶ್ವರ ಹೇಳಿದರು.
ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿ ವಾಹಿನಿ ವತಿಯಿಂದ ಹುಬ್ಬಳ್ಳಿ ನಗರದ ಎಸ್ಜೆಎಂವಿಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶ್ರೀಮತಿ ವಾಣಿ ಆನಂದ ಸಂಕೇಶ್ವರ ಅವರು ಮಾತನಾಡಿದರು.
ಸಾಧಕರಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರೈಲ್ವೆ ಪೊಲೀಸ್ ಇಲಾಖೆಯ ಡಿವೈಎಸ್ಪಿ ಪುಷ್ಪಲತಾ, ಕಿಮ್ಸ್ ಪೆಥಾಲಜಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕವಿತಾ ಏವೂರ, ಉದ್ಯಮಿ ಉಷಾ ಹೆಗಡೆ, ಆಟೋ ಚಾಲಕಿ ಮಂಜುಳಾ ಹಿರೇಮಠ, ಸಾಹಿತಿ ಡಾ.ಪ್ರಜ್ಞಾ ಮತ್ತಿಹಳ್ಳಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವೀಣಾ ಅಠವಲೆ, ರಾಷ್ಟ್ರಮಟ್ಟದ ಶೂಟಿಂಗ್ನಲ್ಲಿ ಪದಕ ವಿಜೇತ ಕ್ರೀಡಾಪಟು ಜ್ಯೋತಿ ಸಣ್ಣಕ್ಕಿ, ಪೌರ ಕಾರ್ಮಿಕ ಮಹಿಳೆ ಮಂಜುಳಾ ನಂದ್ಯಾಳ, ಕೃಷಿ ಸಾಧಕಿ ಪಾರ್ವತಿ ದಂಡಿನ, ಮಹಾವಿದ್ಯಾಲಯದ ಅನುರಾಧಾ ಹೊಸಕೋಟಿ ಅವರನ್ನು ಸನ್ಮಾನಿಸಲಾಯಿತು.
ಬಿ.ಎಂ. ಅಸೋಸಿಯೇಟ್ಸ್ನ ವ್ಯವಸ್ಥಾಪಕ ನಿರ್ದೇಶಕಿ ಸ್ಮಿತಾ ಮಹೇಶ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಹಿಳಾ ಸಾಧಕಿಯರನ್ನ ವಾಣಿ ಆನಂದ ಸಂಕೇಶ್ವರ ಅವರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿನಿಯರು ಸಾಧಕ ಮಹಿಳೆಯರ ಜತೆ ಸಂವಾದ ನಡೆಸಿದರು.