ತಡರಾತ್ರಿ ಘೋರ ದುರಂತ: 8 ತಿಂಗಳ ಮಗು ಸೇರಿ ಐವರು ಮಲಗಿದ್ದಲ್ಲೇ ಸಜೀವ ದಹನ

fire accident death
Published on

ತಿರುವನಂತಪುರಂ: ಸೋಮವಾರ ತಡರಾತ್ರಿ ಮನೆಯೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ, 8 ತಿಂಗಳ ಮಗು ಸೇರಿ ಐವರು ಸಜೀವ ದಹನಗೊಂಡಿದ್ದಾರೆ.

ಇಂತಹ ಧಾರುಣ ಘಟನೆ ಕೇರಳದ ದವಳಪುರಂನಲ್ಲಿ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮನೆ ಮಾಲೀಕ ಪ್ರತಾ​ಪನ್ (64), ಇವರ ಪತ್ನಿ ಶೇರ್ಲಿ(53), ಕಿರಿಯ ಮಗ ಅಖಿಲ್(25), ಹಿರಿಯ ಮಗನ ಪತ್ನಿ ಅಭಿರಾಮಿ(24) ಮತ್ತು 8 ತಿಂಗಳ ಮೊಮ್ಮಗ ರಾಯನ್ ಮಲಗಿದ್ದಲ್ಲೇ ಸುಟ್ಟುಕರಕಲಾಗಿದ್ದಾರೆ. ಮನೆಯಲ್ಲಿದ್ದ ಮತ್ತೊಬ್ಬ ವ್ಯಕ್ತಿ ನಿಖಿಲ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಮನೆಯ ಹೊರಗೆ ನಿಲ್ಲಿಸಿದ್ದ ಐದು ಬೈಕ್‌ಗಳು ಸುಟ್ಟು ಕರಕಲಾಗಿವೆ.

ಮನೆಯಿಂದ ಹೊರ ಬರುತ್ತಿದ್ದ ದಟ್ಟ ಹೊಗೆಯನ್ನ ನೋಡಿ ಭಯಗೊಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದರಾದರೂ ಅಷ್ಟರಲ್ಲಿ ಮನೆಯಲ್ಲಿ ಐವರು ಸುಟ್ಟುಕರಕಲಾಗಿದ್ದರು. ಮನೆಯ ಬಹುತೇಕ ಭಾಗ ಬೆಂಕಿಗೆ ಆಹುತಿಯಾಗಿದೆ. ಈ ದುರಂತಕ್ಕೆ ಕಾರಣ ಏನೆಂದು ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ, ಆದರೆ ಶಾರ್ಟ್ ಸರ್ಕ್ಯೂಟ್​ನಿಂದ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net