ಜಿಲ್ಲೆ

ಹೊಸಾಡಿನಲ್ಲಿ ಸಮಸ್ಯೆಗಳ ಸರಮಾಲೆ!

ಇಂದಿರಾ ಎನ್ ಕೆ

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥದಿಂದ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ-ಅರಾಟೆ ಪ್ರದೇಶಗಳು ಸಮಸ್ಯೆಗಳನ್ನೇ ಹೊದ್ದುಕೊಂಡಿದ್ದು, ಗ್ರಾಮಸ್ಥರು ನಿತ್ಯ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದರೂ ಆಡಳಿತ ವರ್ಗ ತನಗೂ ಇದಕ್ಕೂ ಸಂಬಂಧಿವಿಲ್ಲದಂತಿದೆ.

ರಾಷ್ಟ್ರೀಯ ಹೆದ್ದಾರಿ 66ರ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಂಕ್ಷನ್ ಪ್ರದೇಶ ಅಪಘಾತ ತಾಣವಾಗಿ ಮಾರ್ಪಟ್ಟಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಕಂಟಕವಾಗಿದೆ. ಗಂಗೊಳ್ಳಿ ಮತ್ತು ನಾಡಗುಡ್ಡೆಯಂಗಡಿ ಕಡೆಗಳಿಂದ ಬರುವ ವಾಹನಗಳು ಅಜಾಗರೂಕತೆಯಿಂದ ಸಂಚರಿಸುವುದರಿಂದ ಅಪಘಾತಗಳು ನಡೆಯುತ್ತಲೇ ಇವೆ. ಮುಳ್ಳಿಕಟ್ಟೆ-ಅರಾಟೆ ಸುತ್ತಮುತ್ತ ಸರ್ವೀಸ್ ರಸ್ತೆಗಳಿಲ್ಲ. ಹೊಸಾಡು ಗ್ರಾಮಸ್ಥರು ಹೆದ್ದಾರಿ ದಾಟಿಕೊಂಡೇ ಪಕ್ಕದ ಗ್ರಾಮಗಳಿಗೆ ತೆರಳಬೇಕಿದ್ದು, ಸರ್ವೀಸ್ ರಸ್ತೆಗಳಿಲ್ಲದೇ ಇರುವುದರಿಂದ ಕಷ್ಟವಾಗುತ್ತಿದೆ. ಮೋವಾಡಿಯಿಂದ ಅರಾಟೆವರೆಗೆ ಸರ್ವೀಸ್ ರಸ್ತೆ ನಿರ್ಮಿಸಬೇಕೆಂಬ ಸ್ಥಳೀಯರ ಬೇಡಿಕೆಗೆ ಸ್ಪಂದನೆ ದೊರೆತಿಲ್ಲ. ಅಂಡರ್‌ಪಾಸ್ ಅಥವಾ ಮೇಲ್ಸೆತುವೆ ನಿರ್ಮಾಣದ ಬೇಡಿಕೆ ನನೆಗುದಿಗೆ ಬಿದ್ದಿದೆ.

ಚರಂಡಿ ಸಮಸ್ಯೆ: ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಹೊಸಾಡು ಗ್ರಾಪಂ ವ್ಯಾಪ್ತಿಯ ಮುಳ್ಳಿಕಟ್ಟೆ, ಅರಾಟೆ ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲ. ಹೆದ್ದಾರಿ ಅಗಲೀಕರಣದಿಂದಾಗಿ ಮಳೆ ನೀರಿನ ಹರಿವಿಗೆ ಅಡಚಣೆಯಾಗಿದೆ. ಮೋವಾಡಿಯಿಂದ ಅರಾಟೆಯ ಸೌಪರ್ಣಿಕಾ ನದಿ ತನಕ ಸಮರ್ಪಕ ಕಾಂಕ್ರೀಟ್ ಚರಂಡಿ ನಿರ್ಮಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಂಡರೂ ಮುಳ್ಳಿಕಟ್ಟೆ-ಅರಾಟೆ ಗ್ರಾಮಸ್ಥರು ತಮ್ಮ ಬೇಡಿಕೆ ಈಡೇರಿಕೆಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿಗೆ ಅಲೆದಾಡುವುದು ತಪ್ಪಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಪ್ರತಿಭಟನೆ ಅನಿವಾರ್ಯ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಬಸ್ ತಂಗುದಾಣವಿಲ್ಲ

ಮುಳ್ಳಿಕಟ್ಟೆ ಪ್ರದೇಶದಲ್ಲಿ ನಿತ್ಯವೂ ನೂರಾರು ಬಸ್‌ಗಳು ಸಂಚರಿಸುವ ಈ ಸ್ಥಳದಲ್ಲಿ ಪ್ರಯಾಣಿಕರಿಗೆ ನಿಲ್ಲಲು ತಂಗುದಾಣವೂ ಇಲ್ಲ. ಕುಂದಾಪುರದಿಂದ ಬೈಂದೂರು, ಗಂಗೊಳ್ಳಿ, ಭಟ್ಕಳ, ನಾಡ, ಪಡುಕೋಣೆ, ಆಲೂರು ಕಡೆಗೆ ತೆರಳುವ ಮತ್ತು ಕುಂದಾಪುರ, ಉಡುಪಿಗೆ ತೆರಳುವ ಬಸ್‌ಗಳಿಗೆ ಕಾಯುವ ಪ್ರಯಾಣಿಕರಿಗೆ ನಿತ್ಯವೂ ಬಸ್‌ಗೆ ಕಾಯುವುದೇ ಪಾಡಾಗಿದೆ.

ದಾರಿದೀಪಗಳೇ ಇಲ್ಲಿಲ್ಲ

ಮುಳ್ಳಿಕಟ್ಟೆಯಿಂದ ಮೊವಾಡಿವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿದೀಪಗಳಿಲ್ಲ. ರಾತ್ರಿ ಹೆದ್ದಾರಿಯ ಇಕ್ಕೆಲಗಳಲ್ಲಿ ಜಾನುವಾರುಗಳು ಮಲಗುತ್ತಿದ್ದು, ದಾರಿದೀಪದ ವ್ಯವಸ್ಥೆ ಇಲ್ಲದಿರುವುದರಿಂದ ರಾತ್ರಿ ವೇಳೆ ವಾಹನಗಳು ಸಂಚಾರವೇ ಅಪಾಯಕಾರಿಯಾಗಿದೆ.

ಹೊಸಾಡು ಗ್ರಾಮಸ್ಥರು ಗ್ರಾಪಂ, ವಿಎ ಕಚೇರಿ, ಪಡಿತರ, ಅಂಚೆ ಕಚೇರಿಗೆ ಮುಳ್ಳಿಕಟ್ಟೆಗೆ ಬರಬೇಕಿದ್ದು, ಇಲ್ಲಿನ ಜಂಕ್ಷನ್ ಅಪಾಯಕಾರಿಯಾಗಿದೆ. ಈ ಭಾಗಕ್ಕೆ ಅಂಡರ್‌ಪಾಸ್ ಅಥವಾ ಮೇಲ್ಸೆತುವೆ ನಿರ್ಮಿಸಬೇಕೆಂಬ ಬೇಡಿಕೆಗೆ ಸ್ಪಂದನೆ ದೊರೆತಿಲ್ಲ. ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ರಚನೆ, ದಾರಿದೀಪಗಳ ಅಳವಡಿಕೆ, ಬಸ್ ತಂಗುದಾಣ ಸಹಿತ ಅಗತ್ಯ ಸೌಲಭ್ಯ ಮರೀಚಿಕೆಯಾಗಿದೆ. -ಎಚ್.ಕೆ.ಚಂದ್ರಶೇಖ ಪೂಜಾರಿ ಹೊಸಾಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ

ಪಾಯಿಂಟ್ಸ್

* ಅಪಘಾತ ವಲಯವಾಗಿರುವ ಮುಳ್ಳಿಕಟ್ಟೆ ಜಂಕ್ಷನ್

* ಹೊಸಾಡು ಭಾಗದಲ್ಲಿ ಮಳೆ ನೀರು ಹರಿವಿಗೆ ಅಡ್ಡಿ

* ಮುಳ್ಳಿಕಟ್ಟೆ ಮಾರ್ಗವೇ ಪ್ರಯಾಣಿಕರಿಗೆ ತಂಗುದಾಣ