ಜಿಲ್ಲೆ

ಹೆಜಮಾಡಿ ಟೋಲ್ ಪ್ಲಾಜಾ ಬಳಿ ಪ್ರತ್ಯೇಕ ರಸ್ತೆ ನಿರ್ಮಿಸಿ ಸೆಡ್ಡು

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಗ್ರಾಮದಲ್ಲಿರುವ ಟೋಲ್ ಪ್ಲಾಜಾ ನಿರ್ವಹಣೆ ಮಾಡುತ್ತಿರುವ ಕಂಪನಿಯು ಸ್ಥಳೀಯರನ್ನು ಕಡೆಗಣಿಸಿ ಸ್ಥಳೀಯ ವಾಹನಗಳಿಗೆ ತೀವ್ರ ಸಮಸ್ಯೆ ಒಡ್ಡುತ್ತಿರುವುದನ್ನು ವಿರೋಧಿಸಿ ಹೆಜಮಾಡಿ ಗ್ರಾಪಂ ಆಡಳಿತ ಸೋಮವಾರ ಪ್ರತಿಭಟನೆ ನಡೆಸಿ ಟೋಲ್ ಪ್ಲಾಜಾ ಬಳಿಯೇ ಪ್ರತ್ಯೇಕ ರಸ್ತೆ ನಿರ್ಮಿಸಿ ಸೆಡ್ಡು ಹೊಡೆಯಿತು.

ಹೆಜಮಾಡಿಯಲ್ಲಿ ಟೋಲ್ ಪ್ಲಾಜಾ ನಿರ್ಮಾಣ ಬಳಿಕ ಸಾರ್ವಜನಿಕ ಮನವಿಗೆ ಸ್ಪಂದಿಸಿ ಸ್ಥಳೀಯ ವಾಹನಗಳಿಗೆ ಟೋಲ್ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿತ್ತು. ಕೆಕೆಆರ್ ಕಂಪೆನಿಗೆ ಸ್ವಾಧೀನವಾದ ಬಳಿಕ ಸ್ಥಳೀಯ ವಾಹನಗಳಿಗೆ ಸಮಸ್ಯೆ ಮಾಡುತ್ತಿತ್ತು.

ಸಮಸ್ಯೆ ಗಂಭೀರತೆಯನ್ನು ಮನಗಂಡ ಗ್ರಾಮಾಡಳಿತ ಟೋಲ್ ಮ್ಯಾನೇಜರ್ ತಿಮ್ಮಯ್ಯ ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ವಿನಂತಿಸಿತ್ತು. ಆದರೆ ಅವರು ಉಡಾಫೆಯಾಗಿ ಉತ್ತರಿಸಿದ ಹಿನ್ನೆಲೆಯಲ್ಲಿ ಹೆಜಮಾಡಿ ಗ್ರಾಮವನ್ನು ಸಂಪರ್ಕಿಸುವ ಒಳ ರಸ್ತೆಯಲ್ಲಿ ಟೋಲ್ ಪ್ಲಾಜಾ ಪಕ್ಕದಲ್ಲೇ ಪ್ರತ್ಯೇಕ ರಸ್ತೆ ನಿರ್ಮಿಸಿದರು. ಈ ವೇಳೆ ಪಡುಬಿದ್ರಿ ಠಾಣಾಧಿಕಾರಿ ಶಕ್ತಿವೇಲು ಪ್ರತಿಭಟನಾಕಾರರ ಮೇಲೆ ಏಕಾಏಕಿ ಗರಂ ಆಗಿ ಬಂಧನದ ಬೆದರಿಕೆ ಹಾಕಿದರೂ ಪ್ರತಿಭಟನಾಕಾರರು ಬಗ್ಗಲಿಲ್ಲ. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಜಿಲ್ಲಾಡಳಿತ ನಿರ್ದೇಶನದಂತೆ ಹಿಂದಿನ ಪದ್ಧತಿಯಂತೆ ಕಾರ್ಯನಿರ್ವಹಿಸುವಂತೆ ಹಾಗೂ ಮಂಗಳವಾರ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಪ್ರತ್ಯೇಕ ರಸ್ತೆ ನಿರ್ಮಿಸಿದ ಬಳಿಕ ನೂರಾರು ವಾಹನಗಳು ಪ್ರತ್ಯೇಕ ರಸ್ತೆಯಲ್ಲಿ ಸಂಚರಿಸಿದವು.

ಹೋದ ಬಳಿಕ ರಸ್ತೆ ಮುಚ್ಚಿದರು

ಪ್ರತಿಭಟನಾಕಾರರು ಸ್ಥಳದಿಂದ ತೆರಳಿದ ಬಳಿಕ ಟೋಲ್ ಪ್ಲಾಜಾ ಸಿಬ್ಬಂದಿ ಪ್ರತ್ಯೇಕ ರಸ್ತೆಯನ್ನು ಮುಚ್ಚಿದ್ದಾರೆ. ಇದೇ ವೇಳೆ ಟೋಲ್ ಸಿಬ್ಬಂದಿಗೆ ಅಧಿಕಾರಿಗಳು ನೀಡುತ್ತಿರುವ ಒತ್ತಡ ಹಾಗೂ ಹಿಂಸೆಯ ಬಗ್ಗೆಯೂ ಗ್ರಾಪಂಗೆ ಮನವಿ ಬಂದಿದ್ದು, ಈ ಬಗ್ಗೆಯೂ ಸ್ಥಳೀಯಾಡಳಿತ ಕ್ರಮಕ್ಕೆ ಮುಂದಾಗಿದೆ. ಹೆಜಮಾಡಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಎ.ಮೆಂಡನ್, ಉಪಾಧ್ಯಕ್ಷ ಮೋಹನ್ ಸುವರ್ಣ, ಮಾಜಿ ಅಧ್ಯಕ್ಷ ಪಾಂಡುರಂಗ ಕರ್ಕೇರ, ಸದಸ್ಯ ಶರಣ್‌ಕುಮಾರ್ ಮಟ್ಟು ಸಹಿತ ಎಲ್ಲ ಸದಸ್ಯರು ಭಾಗವಹಿಸಿದ್ದರು.

ನೋಟಿಸ್ ಜಾರಿ

ಈ ಮಧ್ಯೆ ತುರ್ತು ಸಭೆ ನಡೆಸಿದ ಹೆಜಮಾಡಿ ಸ್ಥಳೀಯಾಡಳಿತ, ಅನಧಿಕೃತವಾಗಿ ಹೆಜಮಾಡಿ ಪಿಡಬ್ಲೂೃಡಿ ರಸ್ತೆಯಲ್ಲಿ ನಿರ್ಮಿಸಿರುವ ಪ್ರತ್ಯೇಕ ಟೋಲ್ ಪ್ಲಾಜಾವನ್ನು ತಕ್ಷಣ ತೆರವುಗೊಳಿಸುವಂತೆ ಹೆಜಮಾಡಿ ಟೋಲ್ ಪ್ಲಾಜಾಕ್ಕೆ ನೋಟೀಸ್ ಜಾರಿ ಮಾಡಿದ್ದು, ಅದನ್ನು ಪ್ಲಾಜಾದ ಗೋಡೆಗಳಿಗೆ ಅಂಟಿಸಿದ್ದಾರೆ.