ಕೊಳ್ಳೇಗಾಲ: ಅಂಗಡಿ ಬಾಡಿಗೆ ಹೆಚ್ಚಿಗೆ ನೀಡುವಂತೆ ಕೇಳಿದ ಮಾಲೀಕನಿಗೆ ಬಾಡಿಗೆದಾರ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬುಧವಾರ ಕೊಳ್ಳೆಗಾಲದಲ್ಲಿ ನಡೆದಿದೆ.
ಪಟ್ಟಣದ ದೇವಾಂಗಪೇಟೆ ಮೂಲದ ಜಿ. ಮಂಜುನಾಥ್ ಆರೋಪಿ. ದಕ್ಷಿಣ ಬಡಾವಣೆ ನಿವಾಸಿ ನಾಗೇಂದ್ರ ಗುಪ್ತ ಅವರ ಮೇಲೆ ಹಲ್ಲೆ ನಡೆದಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡಾ.ರಾಜಕುಮಾರ್ ರಸ್ತೆಯಲ್ಲಿರುವ ನಾಗೇಂದ್ರ ಗುಪ್ತ ಅವರ ಮಳಿಗೆಯಲ್ಲಿ ಆರೋಪಿ ಕೆಲ ತಿಂಗಳಿಂದ ಮೊಬೈಲ್ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ. ಅಂಗಡಿ ಮಾಲೀಕ ತಿಂಗಳ ಬಾಡಿಗೆ ಹೆಚ್ಚಿಗೆ ನೀಡುವಂತೆ ಇತ್ತೀಚೆಗೆ ಕೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿ ರಾತ್ರಿ 9 ಗಂಟೆಯಲ್ಲಿ ಬಾಡಿಗೆ ಕೊಡುವ ನೆಪದಲ್ಲಿ ಮಾಲೀಕನ ಮನೆಗೆ ಹೋಗಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.
ಈ ವೇಳೆ ನಾಗೇಂದ್ರ ಗುಪ್ತ ಕೂಗಿಕೊಂಡಾಗ ಆತನ ಹೊಟ್ಟೆಯಲ್ಲಿಯೇ ಚಾಕು ಬಿಟ್ಟು ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಠಾಣೆ ಪಿಎಸ್‌ಐ ತಾಜುದ್ದೀನ್, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.