ಬೆಂಗಳೂರು: ಹವಾಮಾನ ಬದಲಾವಣೆಯಿಂದಾಗಿ ಮಕ್ಕಳಲ್ಲಿ ಕೈ-ಕಾಲು ಮತ್ತು ಬಾಯಿ ಹುಣ್ಣು (ಎಚ್‌ಎಫ್‌ಎಂಡಿ) , ಜ್ವರ, ನೆಗಡಿ, ಕೆಮ್ಮು ಸೇರಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ಪರಿಣಾಮ ಕೆಲ ಖಾಸಗಿ ಶಾಲೆಗಳು ರಜೆ ನೀಡಿವೆ. ನರ್ಸರಿ, ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ರಜೆ ನೀಡಿ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ.
ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಪರಿಣಾಮ ಕೆಲವು ಶಾಲೆಗಳಲ್ಲಿ ಕರೊನಾ ಮಾರ್ಗಸೂಚಿ ಪಾಲಿಸಿ ಶಾಲೆಗಳನ್ನು ನಡೆಸುತ್ತಿವೆ. ಭೌತಿಕ ತರಗತಿಗಳಿಗೆ ರಜೆ ಘೋಷಿಸಿದ್ದು, ಆನ್‌ಲೈನ್ ತರಗತಿಗಳ ಮೊರೆ ಹೋಗಿವೆ. ಮಕ್ಕಳಲ್ಲಿ ಶೀತ, ನೆಗಡಿ, ಜ್ವರ, ಚರ್ಮ ಸೋಂಕು, ಅಲರ್ಜಿ (ಚಿಕನ್ ಪಾಕ್ಸ್, ಕಣ್ಣಿನ ಸೋಂಕು ಮತ್ತು ಕೈ, ಕಾಲು, ಬಾಯಿ ಹುಣ್ಣು) ಕಾಣಿಸಿಕೊಳ್ಳುತ್ತಿವೆ. ಅಂಟುರೋಗದಂತೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿವೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುವ ಮತ್ತು ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ಮಕ್ಕಳಿಗೆ 3 ವಾರ ರಜೆ ನೀಡಲಾಗಿದೆ ಎಂದು ಜಯನಗರದ ಬ್ರೈನಿ ಸ್ಟಾರ್ಸ್ ಸ್ಕೂಲ್‌ನ ಮುಖ್ಯಸ್ಥರು ತಿಳಿಸಿದ್ದಾರೆ.
ತರಗತಿಗಳಲ್ಲಿ ಮಕ್ಕಳು ಒಬ್ಬರಿಗೊಬ್ಬರು ತುಂಬಾ ಸಮೀಪದಿಂದ ಮಾತನಾಡುವುದು ಮತ್ತು ಪರಸ್ಪರ ಆಲಿಂಗನ ಮಾಡುವುದು, ಕೈ, ಕಾಲುಗಳನ್ನು ಮುಟ್ಟುವುದರಿಂದ ಸೋಂಕು ಹರಡುವ ಸಾಧ್ಯತೆಗಳಿರುತ್ತವೆ. ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶೀತಗಾಳಿ ಮತ್ತು ಶೀತದಿಂದ ಕೂಡಿದ ವಾತಾವರಣವಿದೆ. ಇಂತಹ ಸಮಯದಲ್ಲಿ ಮಕ್ಕಳ ಸುರಕ್ಷತೆ ಬಹಳ ಮುಖ್ಯವೆಂದು ಖಾಸಗಿ ಶಾಲೆಯ ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮ: ಹವಾಮಾನದಲ್ಲಿ ಏರುಪೇರಾಗಿರುವ ಕಾರಣ ಮಕ್ಕಳಲ್ಲಿ ಈ ಸಮಯದಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಸೇರಿ ಇನ್ನಿತರ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇದರಿಂದ ಪಾಲಕರು ಮತ್ತು ಮಕ್ಕಳು ಆತಂಕಗೊಳ್ಳುವುದು ಬೇಡ ಎಂಬ ಕಾರಣದಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ. ನಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಕರೊನಾ ಮಾರ್ಗಸೂಚಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದ್ದಾರೆ.