ಜಿಲ್ಲೆ

ನಾಳೆ ತೆಲಂಗಾಣ ಸಿಎಂ ಅರ್ಧ ರಾಜ್ಯವನ್ನೇ ಕೇಳ್ತಾರೆ... ಆಗಲೂ ಮೌನವೇ? ಬೊಮ್ಮಾಯಿ ವಿರುದ್ಧ ಕಾಂಗ್ರೆಸ್​ ಆಕ್ರೋಶ

ಬೆಂಗಳೂರು: ಅಭಿವೃದ್ಧಿ ಮತ್ತು ಮೂಲಸೌಕರ್ಯವನ್ನು ಮುಂದಿಟ್ಟು ಕರ್ನಾಟಕದ ಬಂಡವಾಳ ಹೂಡಿಕೆದಾರರನ್ನು ತೆಲಂಗಾಣಕ್ಕೆ ಸಿಎಂ ಚಂದ್ರಶೇಖರರಾವ್​ ಆಹ್ವಾನಿಸಿದ್ದರು. ಈಗ ರಾಯಚೂರನ್ನೇ ಆಹ್ವಾನಿಸುತ್ತಿದ್ದಾರೆ. ಇದು ನಿಮ್ಮ ಅಭಿವೃದ್ಧಿಶೂನ್ಯ ಆಡಳಿತಕ್ಕೆ ತೆಲಂಗಾಣ ಸಿಎಂ ಮಾಡುತ್ತಿರುವ 'ಅಣಕ' ಅಲ್ಲವೇ ಬಸವರಾಜ ಬೊಮ್ಮಾಯಿ ಅವರೇ ಅವರೇ? ಅಸಮರ್ಥ ಬಿಜೆಪಿಯ ಆಡಳಿತದಲ್ಲಿ ಕರ್ನಾಟಕ ಎಲ್ಲವನ್ನೂ ಕಳೆದುಕೊಳ್ಳಬೇಕೆ? ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್​ ಸರಣಿ ಟ್ವೀಟ್​ ಮಾಡಿ ಆಕ್ರೋಶ ಹೊರಹಾಕಿದೆ.

ರಾಯಚೂರು ತೆಲಂಗಾಣಕ್ಕೆ ಸೇರಬೇಕು ಎಂಬರ್ಥದಲ್ಲಿ ಅಲ್ಲಿನ ಸಿಎಂ ಕೆಸಿಆರ್​ ಹೇಳಿದ್ದಾರೆ. ಇದು ಉದ್ಧಟತನದ ಹೇಳಿಕೆ. ಅವರು ಕೇಳಿದ ತಕ್ಷಣ ಕೊಡಲು ರಾಯಚೂರು KCRರವರ ಪಿತ್ರಾರ್ಜಿತ ಆಸ್ತಿಯಲ್ಲ. ಅದು ಕರ್ನಾಟಕದ ಅವಿಭಾಜ್ಯ ಅಂಗ. KCR ಆಡಳಿತದಲ್ಲಿ ತೆಲಂಗಾಣ ಹಾಳು ಕೊಂಪೆಯಾಗಿದೆ. ಮೊದಲು ತೆಲಂಗಾಣ ಉದ್ಧಾರ ಮಾಡಲಿ.‌ ಆಮೇಲೆ ನೆರೆ ರಾಜ್ಯದ ಮಾತು. ನೆರೆ ರಾಜ್ಯದ ಮುಖ್ಯಮಂತ್ರಿಯೊಬ್ಬರು ರಾಯಚೂರು ವಿಚಾರವಾಗಿ ತಗಾದೆ ತೆಗೆದಿದ್ದಾರೆ. ಇಷ್ಟಾದರೂ ಬೊಮ್ಮಾಯಿ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನೆಲ-ಜಲ, ನಾಡು-ನುಡಿಯ ವಿಚಾರದಲ್ಲಿ ಈ ಸರ್ಕಾರಕ್ಕೆ‌ ಬದ್ಧತೆ, ಕಾಳಜಿ ಇಲ್ಲವೆ? ಇಂದು ರಾಯಚೂರು ಕೇಳಿದ ತೆಲಂಗಾಣ ಮುಖ್ಯಮಂತ್ರಿ, ನಾಳೆ ಅರ್ಧ ರಾಜ್ಯವನ್ನೇ ಕೇಳುತ್ತಾರೆ. ಆಗಲೂ ಇದೇ ಮೌನವೇ? ಎಂದು ದಿನೇಶ್​ ಗುಂಡೂರಾವ್​ ಟೀಕಿಸಿದ್ದಾರೆ.

ಕನ್ನಡಿಗರು ಮತ್ತು ತೆಲುಗು ಭಾಷಿಕರ ನಡುವೆ ಅಣ್ಣ ತಮ್ಮಂದಿರ ಸೌರ್ಹಾದತೆಯಿದೆ. ರಾಯಚೂರು ವಿಚಾರವಾಗಿ ತೆಲಂಗಾಣ ಸಿಎಂ ಹೇಳಿಕೆ ಈ ಸಂಬಂಧಕ್ಕೆ ಹುಳಿ ಹಿಂಡುವ ಯತ್ನ. ಈಗಾಗಲೇ ಅಖಂಡ ಆಂಧ್ರ ಇಬ್ಭಾಗ ಮಾಡಿರುವ KCR ಈಗ ಕರ್ನಾಟಕ ಒಡೆಯುವ ಯತ್ನ ಮಾಡುತ್ತಿದ್ದಾರೆ. ಆದರೆ KCR ಯತ್ನ ಕರ್ನಾಟಕದಲ್ಲಿ ನಡೆಯುವುದಿಲ್ಲ. ಇದು ರಾಜ್ಯದ ಅಸ್ಮಿತೆಯ ಪ್ರಶ್ನೆ ಎಂದು ದಿನೇಶ್​ ಗುಂಡೂರಾವ್​ ಸರಣಿ ಟ್ವೀಟ್​ ಮಾಡಿದ್ದಾರೆ.

ಕಾಂಗ್ರೆಸ್​ ನಾಯಕ ಈಶ್ವರ್​ ಖಂಡ್ರೆ ಕೂಡ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯನ್ನು ತೆಲಂಗಾಣ ರಾಜ್ಯಕ್ಕೆ ಸೇರಿಸಬೇಕೆಂದಿರುವ ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಅವರ ಹೇಳಿಕೆ ಅತ್ಯಂತ ಖಂಡನೀಯ, ರಾಯಚೂರು ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗವಾಗಿರಲಿದೆ. ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸಬೇಕೆಂದಿರುವ ರಾಯಚೂರು ಶಾಸಕರಾದ ಡಾ.ಶಿವರಾಜ ಪಾಟೀಲ್ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ಮೊನ್ನೆ ತೆಲಂಗಾಣ ಸಿಎಂ ರವರು ಬಿಜೆಪಿ ಶಾಸಕರ ಹೆಸರನ್ನು ಉಲ್ಲೇಖಿಸಿ ರಾಯಚೂರು ತೆಲಂಗಾಣ ರಾಜ್ಯಕ್ಕೆ ಸೇರಿಸಬೇಕೆಂದು ಹೇಳಿಕೆ ಕೊಟ್ಟರೂ ಆಡಳಿತರೂಢ ಸರ್ಕಾರದ ಯಾರೊಬ್ಬರೂ ಇದನ್ನು ಖಂಡಿಸದಿರುವುದು ಅತ್ಯಂತ ದುರಾದೃಷ್ಟಕರ ಎಂದಿದ್ದಾರೆ.

ಈ ಹೇಳಿಕೆ ಮತ್ತು ರಾಜ್ಯ ಸರ್ಕಾರದ ಮೌನವನ್ನು ಗಮನಿಸಿದರೆ ಬಿಜೆಪಿ ಅವರಿಗೆ ಕಲ್ಯಾಣ ಕರ್ನಾಟಕದ ಬಗ್ಗೆ ಇರುವ ದ್ವೇಷ ಮತ್ತು ಈ ಭಾಗದ ಬಗ್ಗೆ ಅವರ ಮಲತಾಯಿ ಧೋರಣೆ ಎಷ್ಟೊಂದು ಅನ್ನೋದು ಮತ್ತೊಮೆ ಸಾಬೀತಾಗಿದೆ ಎಂದು ಈಶ್ವರ್​ ಖಂಡ್ರೆ ಟೀಕಿಸಿದ್ದಾರೆ.