ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಬಾರದೂರಿಗೆ ಹೋಗಿ 3 ದಿನ ಕಳೆದಿದ್ದರೂ ಕುಟುಂಬಸ್ಥರು ಮತ್ತು ಅಭಿಮಾನಿಗಳ ಮನದಲ್ಲಿನ ನೋವು ಕಿಂಚಿತ್ತೂ ಕರಗಿಲ್ಲ. ಅಪ್ಪು ಇನ್ನು ನೆನಪು ಮಾತ್ರ ಎಂಬ ಕಹಿಸತ್ಯ ಮನಸ್ಸನ್ನ ಹಿಂಡುತ್ತಲೇ ಇದೆ. ಇಂತಹ ನೋವಿನ ಸಂದರ್ಭದಲ್ಲೂ ಕಿಡಿಗೇಡಿಗಳು ಪುನೀತ್ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿ ಕೀಳು ಮನಸ್ಥಿತಿಯನ್ನ ಪ್ರದರ್ಶಿಸಿದ್ದಾರೆ. ಇಂಹತ ವಿಕೃತ ಮನಸ್ಸಿನ ಕಿಡಿಗೇಡಿಗಳಿಗೆ ನಟ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಅ.29ರಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಅಪ್ಪು ಅವರ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಮಂದಿ ಕಂಠೀರವ ಸ್ಟೇಡಿಯಂನತ್ತ ಧಾವಿಸುತ್ತಲೇ ಇದ್ದರು. ಅಪ್ಪು ಅಗಲಿಕೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರಲ್ಲಿ ಭಾನುವಾರದವರೆಗೂ ಬಾರ್ ಮತ್ತು ಪಬ್ಗಳನ್ನ ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡಬೇಡಿ. ಪುನೀತ್ ಅವರನ್ನ ಅತ್ಯಂತ ಗೌರವಯುತವಾಗಿ, ಶಾಂತಿಯುತವಾಗಿ ಕಳುಹಿಸಿ ಕೊಡಲು ಸಹಕರಿಸಿ. ಅಪ್ಪು ಅಗಲಿಕೆ ನೋವಿನಲ್ಲಿ ಅಭಿಮಾನಿಗಳು ತಾಳ್ಮೆ, ಸ್ಥಿಮಿತ ಕಳೆದುಕೊಳ್ಳಬಾರದು. ಕುಡಿದ ಅಮಲಿನಲ್ಲಿ ಕೆಲ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾದರೆ ಕಷ್ಟ ಎಂದು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಬಾರ್ಗಳನ್ನ ಬಂದ್ ಮಾಡಿಸಿತ್ತು.
ಈ ವೇಳೆ ಮದ್ಯಕ್ಕಾಗಿ ಪರದಾಡಿದ್ದ ಉತ್ತರ ಭಾರತ ಮೂಲದ ಕೆವರು ಕೀಳು ಮನಸ್ಥಿತಿ ಪ್ರದರ್ಶಿಸಿದ್ದಾರೆ. ಉತ್ತರ ಭಾರತದಿಂದ ಬಂದು ಬೆಂಗಳೂರಲ್ಲಿ ಉದ್ಯೋಗ ಮಾಡುತ್ತಿರುವ ಕೆಲವರು ಎಣ್ಣೆಗಾಗಿ ಅಲೆದಾಡಿದ್ದಾರೆ. ನಿಷೇಧದ ನಡುವೆ ಕೊನೆಗೂ ಬಿಯರ್ ಸಿಕ್ಕಿದೆ. ಬಳಿಕ ಕಾರಿನಲ್ಲಿ ಬಿಯರ್ ಬಾಟಲಿ ಹಿಡಿದು ಫೋಟೋ ಕ್ಲಿಕ್ಕಿಸಿ ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಅಷ್ಟೇ ಅಲ್ಲ ಫೋಟೋ ಜತೆಗೆ ಪುನಿತ್ ರಾಜ್ಕುಮಾರ್ ಬಗ್ಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ''ರಾಜ್ಕುಮಾರ್ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೀವು ನೆನಪಿನಲ್ಲೇ ಇಟ್ಟುಕೊಳ್ಳಿ ಮರೆಯಬೇಡಿ. ನಾನು ಎಣ್ಣೆ ಕುಡಿದು ಬಳಿಕ ಆತನ ಸಮಾಧಿ ಮೇಲೆ ಮೂ** ಮಾಡುತ್ತೇವೆ'' ಎಂದು ಫೋಸ್ಟ್ ಮಾಡಿದ್ದಾನೆ. ಇದನ್ನ ಕಂಡ ಸುದೀಪ್ ಪುತ್ರಿ ಸಾನ್ವಿ, ಕಿಡಿಗೇಡಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
'ಜನರಿಗೆ ಮನುಷ್ಯತ್ವ ಇಲ್ಲವೇ? ಮದ್ಯಕ್ಕಾಗಿ ಪುನೀತ್ ಬಗ್ಗೆ ಇಂಥ ಮನಸ್ಥಿತಿಯೇ?' ಎಂದು ಪ್ರಶ್ನಿಸಿರುವ ಸಾನ್ವಿ, 'ಕರ್ನಾಟಕ ಸರ್ಕಾರ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿತ್ತು. ಬೆಂಗಳೂರಲ್ಲಿ ವಾಸವಿರುವ ಉತ್ತರ ಭಾರತದವರು ಸ್ವಲ್ಪವಾದರೂ ಪ್ರಜ್ಞಾವಂತಿಕೆ ತೋರಿ' ಎಂದು ಛಾಟಿ ಬೀಸಿದ್ದಾರೆ.
ಪುನೀತ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಕಿಡಿಗೇಡಿಗಳನ್ನ ಪತ್ತೆ ಹಚ್ಚಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.