ಜಿಲ್ಲೆ

ಸಮಾನತೆಯಿಂದ ಸಮೃದ್ದ ಭಾರತ ಸಾಧ್ಯ; ಎಫ್‌ಕೆಸಿಸಿಐ ಮಹಿಳಾ ದಿನಾಚರಣೆಯಲ್ಲಿ ಎಂ.ಜಿ.ಬಾಲಕೃಷ್ಣ ಅಭಿಮತ

ಬೆಂಗಳೂರು: ಮಹಿಳೆ ಪುರುಷ ಸಮಾನತೆ ಸಾಧ್ಯವಾದಾಗ ಮಾತ್ರ ಸಮಗ್ರ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬಲ್ಲದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಅಧ್ಯಕ್ಷರಾದ ಎಂ.ಜಿ ಬಾಲಕೃಷ್ಣ ಹೇಳಿದ್ದಾರೆ.

ಎಫ್‌ಕೆಸಿಸಿಐನ ಸರ್.ಎಂ.ವಿ.ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹಿಳೆಯರಲ್ಲಿ ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟನೆ ಬಹಳ ಮುಖ್ಯ. ಎಲ್ಲರೂ ಒಂದಾಗಿ ದೌರ್ಜನ್ಯವನ್ನು ವಿರೋಧಿಸಬೇಕು. ಭಾರತದಲ್ಲಿ ಮಹಿಳೆಯನ್ನು ಪೂಜ್ಯನೀಯ ಸ್ಥಾನದಲ್ಲಿ ಇಡಲಾಗಿದೆ. ಮಹಿಳೆ-ಪುರುಷ ಸಮಾನತೆ ಸಾಧ್ಯವಾದಾಗ ಮಾತ್ರ ಸಮಗ್ರ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬಲ್ಲದು. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಸ್ತ್ರೀವಾದ ಎಂದರೆ ಪುರುಷರನ್ನು ದ್ವೇಷಿಸುವುದಲ್ಲ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸಾಧನೆ ಮಾಡಿದ 18 ಮಹಿಳಾ ಉದ್ಯಮಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಂಸದೆ ಡಾ. ಸುಮಲತಾ ಅಂಬರೀಷ್, ಎನ್‌ಆರ್‌ಐ ವೇದಿಕೆ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಉದ್ಯಮಿಗಳಾದ ಭವ್ಯ ಗೌಡ, ಡಾ. ಮಧುರಾಣಿ ಗೌಡ, ಉಮಾರೆಡ್ಡಿ, ಟಿ. ಸಾಯಿರಾಂ ಪ್ರಸಾದ್. ರಮೇಶ್ ಚಂದ್ರ ಲಹೋಟಿ ಮತ್ತಿತರರು ಪಾಲ್ಗೊಂಡಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಎಫ್‌ಕೆಸಿಸಿಐ ಮಹಿಳಾ ಉದ್ಯಮಿಗಳು ತಯಾರಿಸಿದ್ದ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವೇದಿಕೆ ಕಾರ್ಯಕ್ರಮ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಫಾಷ್ಯನ್ ಷೋ ನಡೆಯಿತು.