ಶಿವಮೊಗ್ಗ: ಗಂಡನಿಗೆ ಪತ್ನಿಯ ಸೀಮಂತ ಕಾರ್ಯ ಕಣ್ತುಂಬಿಕೊಂಡು ಹರಸುವುದು ವಿಶೇಷ ಸಂಗತಿಗಳಲ್ಲಿ ಒಂದು. ಆದರೆ ಇಲ್ಲೊಬ್ಬ ತನ್ನ ಪತ್ನಿಯ ಸೀಮಂತಕ್ಕೆ ಹೋಗದೆ ತನ್ನ ಮನೆಯನ್ನೇ ಬಿಟ್ಟು ಪರಾರಿಯಾಗಿದ್ದಾನೆ!
ಶಿವಮೊಗ್ಗದ ಆರ್‌ಎಂಎಲ್ ನಗರದ ಯುವಕ, ಗಾರ್ಡನ್ ಏರಿಯಾದ ಯುವತಿಯನ್ನು ಮದುವೆಯಾಗಿದ್ದ. ಹೆರಿಗೆಗೆಂದು ಪತ್ನಿ ತವರು ಮನೆಗೆ ತೆರಳಿದ್ದಳು. ಸಂಪ್ರದಾಯದಂತೆ ತವರುಮನೆಯಲ್ಲಿ ಗರ್ಭಿಣಿಗೆ ಸೀಮಂತ ಶಾಸ್ತ್ರ ನಿಗದಿಯಾಗಿತ್ತು. ಪತ್ನಿಯೇ ಪತಿಗೆ ಕರೆ ಮಾಡಿ, ಸೀಮಂತ ಶಾಸ್ತ್ರಕ್ಕೆ ಬನ್ನಿ ಎಂದು ಕರೆದಿದ್ದಳು.
ಆದರೆ ಪತ್ನಿಯ ಆಹ್ವಾನವನ್ನು ತಿರಸ್ಕರಿಸಿದ ಯುವಕ, ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ. ಆ ನಂತರ ನೋಡಿದರೆ ಮನೆಯನ್ನೇ ಬಿಟ್ಟು ಹೋಗಿದ್ದಾನೆ. ಪತ್ನಿಯ ಮನೆಗೂ ಹೋಗಿಲ್ಲ. ಸೀಮಂತಕ್ಕೆ ಕರೆದರೆ ಮನೆ ಬಿಟ್ಟು ಹೋಗಿದ್ದೇಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಗಂಡನನ್ನು ಹುಡುಕಿಕೊಡಿ ಎಂದು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.