ಜಿಲ್ಲೆ

ಜೆಡಿಎಸ್​ನಲ್ಲಿ ಬಕೆಟ್ ಹಿಡಿಯುವವರಿಗಷ್ಟೆ ಮಣೆ... ಜೆಡಿಎಸ್​ನ​ ರಾಜ್ಯ ಉಪಾಧ್ಯಕ್ಷ ಪ್ರದೀಪಗೌಡ ರಾಜೀನಾಮೆ

ಕೊಪ್ಪಳ: ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಬಕೆಟ್ ಹಿಡಿಯುವವರ, ಕಿವಿ ಕಡಿಯುವವರ ಮಾತು ಕೇಳುತ್ತಾರೆ. ಪಕ್ಷದ‌ ನಿಜವಾದ ಕಾರ್ಯಕರ್ತರಿಗೆ ಜೆಡಿಎಸ್​ನಲ್ಲಿ ಬೆಲೆ ಇಲ್ಲ. ಶೀಘ್ರದಲ್ಲೇ ಕೊಪ್ಪಳ ಜಿಲ್ಲೆಯ ಬಹುತೇಕ ಪದಾಧಿಕಾರಿಗಳು ರಾಜೀನಾಮೆ ನೀಡಲಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ್, ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರದೀಪ್​ಗೌಡ, ದಶಕದಿಂದ ಪಕ್ಷ ಸಂಘಟನೆಗಾಗಿ ದುಡಿದಿರುವೆ. ಆದರೆ, ಸೂಕ್ತ ಸ್ಥಾನಮಾನ ದೊರೆಯಲಿಲ್ಲ. ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವೆ. ಆಗಲೂ ವರಿಷ್ಠರು ಬೆಂಬಲ ನೀಡಲಿಲ್ಲ ಎಂದು ಅಸಮಾಧನ ಹೊರಹಾಕಿದರು.

ಉತ್ತರ ಕರ್ನಾಟಕ ಭಾಗವನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅವರು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಇದೇ ಕಾರಣಕ್ಕೆ ಈ ಭಾಗದಲ್ಲಿ ಜೆಡಿಎಸ್ ಬಲಗೊಳ್ಳುತ್ತಿಲ್ಲ. ಹಂತ ಹಂತವಾಗಿ ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಕಿವಿ ಕಡಿಯುವವರ ಮಾತಿಗೆ ಕುಮಾರಸ್ವಾಮಿ ಬೆಲೆ ನೀಡುತ್ತಾರೆ. ಹೀಗಾಗಿ ನನ್ನ ರಾಜ್ಯ ಉಪಾಧ್ಯಕ್ಷ ಹಾಗೂ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವೆ. ನನ್ನ ಹಿಂದೇಯೇ ಜಿಲ್ಲೆಯ ಅನೇಕ ಪದಾಧಿಕಾರಿಗಳು ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ. ಕ್ಷೇತ್ರದ ಜನರು ನನ್ನ ಬೆಂಬಲಕ್ಕಿದ್ದು, ಎಲ್ಲರೊಡನೆ ಚರ್ಚಿಸಿ ಮುಂದಿನ ನಡೆ ನಿರ್ಧರಿಸುವೆ ಎಂದರು.