ಜಿಲ್ಲೆ

ಮಂಗಳೂರಿನ ಮೀನು ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ: 5ಕ್ಕೇರಿದ ಮೃತರ ಸಂಖ್ಯೆ

ಮಂಗಳೂರು: ಇಲ್ಲಿನ ಹೊರವಲಯದ ಎಸ್​ಇಝೆಡ್ (ವಿಶೇಷ ಆರ್ಥಿಕ ವಲಯ) ವಲಯದ ಮೀನಿನ ಫ್ಯಾಕ್ಟರಿಯಲ್ಲಿ ಸಂಭವಿಸಿದ ವಿಷಾನಿಲ ಸೋರಿಕೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೇರಿದೆ.

ಶ್ರೀ ಉಲ್ಕಾ ಎಲ್​ಎಲ್​ಪಿ ಮೀನು ಸಂಸ್ಕರಣಾ ಕಂಪನಿಯ ತ್ಯಾಜ್ಯ ಸಂಗ್ರಹ ತೊಟ್ಟಿಯಲ್ಲಿ ವಿಷಾನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿದೆ. ಭಾನುವಾರ ರಾತ್ರಿ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕನ್ನು ಶುಚಿಗೊಳಿಸಲು ಕೆಳಗಿಳಿದಿದ್ದ. ಈ ವೇಳೆ ಏಕಾಏಕಿ ವಿಷಾನಿಲ ಸೋರಿಕೆಯಾಗಿ ಆತ ಅಸ್ವಸ್ಥಗೊಂಡು ಬಿದ್ದಿದ್ದಾನೆ. ಕೂಡಲೇ ಆತನನ್ನು ರಕ್ಷಿಸಲು 8 ಕಾರ್ಮಿಕರು ಹೋಗಿದ್ದಾರೆ. ಈ ವೇಳೆ ಅವರು ಕೂಡ ಅಸ್ವಸ್ಥಗೊಂಡು, ಉಸಿರಾಟದಲ್ಲಿ ಏರುಪೇರಾಗಿತ್ತು. ಕೂಡಲೇ ಅವರೆಲ್ಲರನ್ನೂ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಅಷ್ಟರಲ್ಲಿ ಮೂವರು ಮೃತಪಟ್ಟಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಐವರ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೆ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಮೃತಪಟ್ಟವರೆಲ್ಲರೂ ಪಶ್ಚಿಮ ಬಂಗಾಳ ಮೂಲದವರು. ಸಮಿರುಲ್ಲ ಇಸ್ಲಾಂ, ಉಮರ್ ಫಾರೂಕ್, ನಿಜಾಮುದ್ದೀನ್ ಸಾಜ್ ಮತ್ತು ಮಿರಾಜುಲ್ ಇಸ್ಲಾಂ, ಶರಾಫತ್ ಆಲಿ ಮೃತ ದುರ್ದೈವಿಗಳು. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಅಜನ್ ಆಲಿ, ಕರೀಬುಲ್ಲ, ಅಫ್ತಲ್ ಮಲ್ಲಿಕ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಮೃತರ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಮೃತದೇಹಗಳನ್ನು ಮಂಗಳೂರಿನ ಎಜೆ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.