ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಕೆಂಪುಕಲ್ಲು ಕ್ವಾರಿ ಮಾಲಿಕರು ನಡೆಸಿಕೊಂಡು ಬರುತ್ತಿರುವ ಅನಿರ್ಧಿಷ್ಟಾವಧಿ ಉಪವಾಸ ಧರಣಿ ಕುಳಿತಿದ್ದ ಕ್ವಾರಿ ಮಾಲೀಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ನೀಲೇಶ್ವರ ಮಲ್ಲಚ್ಚೇರಿ ನಿವಾಸಿ, ಕಲ್ಲು ಕ್ವಾರಿ ಅಸೋಸಿಯೇಶನ್ ಜಿಲ್ಲಾ ಉಪಾಧ್ಯಕ್ಷ ಗೋಪಾಲಕೃಷ್ಣನ್ ಆತ್ಮಹತ್ಯೆಗೆ ಯತ್ನಿಸಿದವರು. ಮುಷ್ಕರ ಚಪ್ಪರದೊಳಗೆ ಪ್ರತಿಭಟನೆ ನಡೆಯುತ್ತಿದ್ದಂತೆ ಅಸೌಖ್ಯಪೀಡಿತರಾಗಿ ಕುಸಿದು ಬಿದ್ದ ಇವರನ್ನು ಜತೆಗಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷ ಸೇವಿಸಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.
ಮಂಗಳವಾರ ತಡರಾತ್ರಿವರೆಗೂ ಚೀಟಿಯಲ್ಲಿ ಏನೋ ಬರೆಯುತ್ತಿದ್ದು, ಇದು ಮುಷ್ಕರಕ್ಕೆ ಸಂಬಂಧಿಸಿದ ಘೋಷಣೆಯಾಗಿರಬೇಕೆಂದು ಜತೆಗಿದ್ದವರು ಊಹಿಸಿದ್ದರು. ಜೇಬಿನಲ್ಲಿ ಡೆತ್‌ನೋಟ್ ಸಿಕ್ಕಿದ್ದು, ಇದರಲ್ಲಿ ಸಾಲಬಾಧೆಯಿಂದ ಕ್ವಾರಿ ಮುಂದುವರಿಸುವುದು ಅಸಾಧ್ಯವಾಗಿದ್ದು, ಇದಕ್ಕಾಗಿ ಆತ್ಮಹತ್ಯೆಗೆ ಶರಣಾಗುವುದಾಗಿ ಬರೆದಿದ್ದರು. ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕೆಂಪುಕಲ್ಲು ಕ್ವಾರಿ ಮಾಲಿಕರ ಕ್ಷೇಮಾಭಿವೃದ್ಧಿ ಸಂಘ ವಿವಿಧ ಬೇಡಿಕೆ ಮುಂದಿರಿಸಿ ವಿದ್ಯಾನಗರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿರಿಸಿದ್ದು, ಬುಧವಾರ ಉಪವಾಸನಿರತ ಮಾಲೀಕರು ಹಾಗೂ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಜಿಲ್ಲೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರು ನೇರವಾಗಿ ಜೀವನ ನಿರ್ವಹಿಸುತ್ತಿರುವ ಕೆಂಪುಕಲ್ಲು ಕ್ವಾರಿ ವಲಯಕ್ಕೆ ನ್ಯಾಯಸಮ್ಮತ ಪರವಾನಗಿ ನೀಡುವುದರ ಬದಲು ಅಧಿಕಾರಿಗಳು ತಮಗೆ ತೋಚಿದಂತೆ ಕಾನೂನು ಜಾರಿ ಮಾಡುವ ಮೂಲಕ ಈ ವಲಯವನ್ನು ದಮನಿಸಲು ಯತ್ನಿಸುತ್ತಿದೆ. ಕೆಂಪುಕಲ್ಲು ಕ್ವಾರಿ ಮಾಲೀಕರಿಗೆ ನಿರಂತರ ಕಿರುಕುಳ ನೀಡಲಾಗುತ್ತಿರುವುದು ಖಂಡನೀಯ ಎಂದು ಎಂದು ಮಾಲೀಕರು ಆರೋಪಿಸಿದ್ದಾರೆ.