ಜಿಲ್ಲೆ

ಮಕ್ಕಳ ಪ್ರತಿಭೆ ಹೊರತರಲು ವೇದಿಕೆ ಅಗತ್ಯ

ಕುಂದಾಪುರ: ಸಾಂಸ್ಕೃತಿಕ ಸ್ಪರ್ಧಾ ವೇದಿಕೆಯಿಂದ ಮಕ್ಕಳ ಪ್ರತಿಭೆ ಹೊರತರಲು ಸಹಾಯಕವಾಗುತ್ತವೆ. ಮಕ್ಕಳೊಳಗಿನ ಭಯ ಹೋಗಲಾಡಿಸಿ ಆತ್ಮವಿಶ್ವಾಸ ಮೂಡಿಸುತ್ತವೆ ಎಂದು ಸು ಫ್ರಮ್ ಸೋ ಸಿನಿಮಾ ನಟ ಸನಿಲ್ ಗೌತಮ್(ರವಿಯಣ್ಣ) ಹೇಳಿದರು. ಯಡಾಡಿ ಮತ್ಯಾಡಿಯಲ್ಲಿರುವ ವಿದ್ಯಾರಣ್ಯ ಶಾಲೆ ವಠಾರದಲ್ಲಿ ಶ್ರೀ ಕೃಷ್ಟಾಷ್ಟಮಿ ಪ್ರಯುಕ್ತ ಏರ್ಪಡಿಸಿದ್ದ ಮುದ್ದು ಕೃಷ್ಣ ಸ್ಪರ್ಧೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಇಂತಹ ಸ್ಪರ್ಧೆ ನನಗೆ ಕಲಾವಿದನಾಗುವುದಕ್ಕೆ ಅಡಿಪಾಯವಾಗಿದ್ದು. ನಾನು ಮೊದಲು ಹಾಕಿದ್ದು ರಾಧೆಯ ವೇಷ. ನಂತರ ಕೃಷ್ಣ ವೇಷ ಹಾಕಿ ಮೂರು ಬಾರಿ ಬಹುಮಾನ ಗೆದ್ದಿದ್ದೇನೆ ಎಂದು ಬಾಲ್ಯದಲ್ಲಿ ತಮಗಾದ ಪ್ರಭಾವ ಮೆಲುಕು ಹಾಕಿದರು. ಇಂತಹ ಕಾರ್ಯಕ್ರಮಗಳ ಮೂಲಕ ಸುಜ್ಞಾನ ಸಂಸ್ಥೆ ಮಕ್ಕಳ ಬೆನ್ನೆಲುಬಾಗಿ ನಿಂತಿದೆ. ಇದರಿಂದ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳಲು ಸಹಾಯವಾಗುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರಮೇಶ್ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿದರು. ಭರತನಾಟ್ಯ ಕಲಾವಿದರಾದ ವಿದ್ವಾನ್ ಕೆ.ಭವಾನಿ ಶಂಕರ್, ವಿದ್ಯಾ ಸಂದೇಶ್, ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ, ಸಂಗೀತ ಶಿಕ್ಷಕಿ ಮತ್ತು ನೃತ್ಯಗಾರ್ತಿ ಮೀನಾ ಕಾರಂತ ಸಾಸ್ತಾನ ತೀರ್ಪುಗಾರರಾಗಿದ್ದರು. ಸುಜ್ಞಾನ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ, ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮುಖ್ಯಶಿಕ್ಷಕ ಪ್ರದೀಪ್ ಕೆ. ಉಪಸ್ಥಿತರಿದ್ದರು. ಶಿಕ್ಷಕಿಯರಾದ ಪ್ರೀತಿ ಚಂದ್ರಶೇಖರ, ವಿನುತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಗೆ ಸನ್ಮಾನ

ಸೀನಿಯರ್ ವಿಭಾಗದಲ್ಲಿ ವೈ.ಆರಾಧ್ಯ ಭಟ್(ಪ್ರಥಮ), ಶ್ರೀಯಾ ಕಾಂಚನ್(ದ್ವೀತಿಯ), ವೃಷಾಲಿ ಶಾಸ್ತ್ರಿ(ತೃತೀಯ) ಸ್ಥಾನ ಪಡೆದರು. ಜೂನಿಯರ್ ವಿಭಾಗದಲ್ಲಿ ಆಕೃತಿ ಎ.ಪೂಜಾರಿ(ಪ್ರಥಮ), ಶ್ರೀದ ಕೆ.ಕಾಂಚನ್(ದ್ವೀತಿಯ), ಲಕ್ಷೃ ಜೆ.ಕೆ.(ತೃತೀಯ) ಸ್ಥಾನ ಪಡೆದರು. ಭಾಗವಹಿಸಿದ ಪ್ರತಿ ಸ್ಪರ್ಧಿಗೂ ಪ್ರಮಾಣಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಯಿತು.