ಧನಂಜಯ ಗುರುಪುರ ಗುರುಪುರ ಪಂಚಾಯಿತಿ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್ ಮೂಲಕ ರಾಷ್ಟ್ರೀಯ ಹೆದ್ದಾರಿ 169ಕ್ಕೆ ಸಂಪರ್ಕ ಕಲ್ಪಿಸುವ ಒಳರಸ್ತೆಯಲ್ಲಿ ರಾಶಿಗಟ್ಟಲೆ ತ್ಯಾಜ್ಯ ತುಂಬಿದ್ದರೂ ತ್ಯಾಜ್ಯ ವಿಲೇವಾರಿ ತನಗೆ ಸಂಬಂಧಿಸಿದ ವಿಷಯವಲ್ಲವೇನೋ ಎಂಬಂತೆ ಪಂಚಾಯಿತಿ ಆಡಳಿತ ವರ್ತಿಸುತ್ತಿದೆ ಎಂಬಿತ್ಯಾದಿ ದೂರುಗಳು ನಾಗರಿಕ ವಲಯದಿಂದ ಕೇಳಿಬಂದಿವೆ. ಕೆಲವು ವರ್ಷಗಳ ಹಿಂದೆ ಸರ್ಕಾರದಿಂದ ಸ್ವಚ್ಛ ಗ್ರಾಮ ಪಂಚಾಯಿತಿ ಎಂದು ಪುರಸ್ಕಾರ ಪಡೆದಿದ್ದ ಗುರುಪುರ ಪಂಚಾಯಿತಿ ಈಗ ಸಾರ್ವಜನಿಕ ಸ್ಥಳಗಳಲ್ಲಿ ತುಂಬಿರುವ ತ್ಯಾಜ್ಯ ವಿಲೇವಾರಿಗೆ ಕಿಂಚಿತ್ತೂ ಮನಸ್ಸು ವಾಡಿದಂತೆ ತೋರುತ್ತಿಲ್ಲ. ಒಳ ರಸ್ತೆಗಳ ತುಂಬೆಲ್ಲ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಕಂಡುಬರುತ್ತಿದೆ. ಇಲ್ಲಿ ಬೀದಿ ನಾಯಿಗಳು ಮತ್ತು ಬೀಡಾಡಿ ಜಾನುವಾರು ಹಾವಳಿ ಜಾಸ್ತಿಯಾಗಿದ್ದು, ಅವುಗಳ ಸಂಚಾರ ವಾಹನ ಸವಾರರಿಗೆ ಅಪಾಯ ತಂದೊಡ್ಡುವಂತಿದೆ. ಪ್ರದೇಶ ರೋಗರುಜಿನ ಹರಡುವ ತಾಣದಂತಾಗಿದೆ. ಮಠದಗುಡ್ಡೆ ಸೈಟ್ ರಸ್ತೆಯಲ್ಲಿ ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ತುಂಬಿರುವ ಒಣ ಮತ್ತು ಹಸಿ ತ್ಯಾಜ್ಯದಿಂದ ಈ ಪ್ರದೇಶ ನಿರಂತರ ದುರ್ವಾಸನೆಯಿಂದ ಕೂಡಿರುತ್ತದೆ. ತ್ಯಾಜ್ಯ ಎಸೆಯುವವರ ಪತ್ತೆಗೆ ರಸ್ತೆ ಪಕ್ಕದಲ್ಲಿ ಅಳವಡಿಸಲಾದ ಒಂದು ಸಿ.ಸಿ. ಕ್ಯಾಮರಾ ಕೆಲಸ ನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬ ಸ್ಪಷ್ಟತೆ ಯಾರಲ್ಲೂ ಇಲ್ಲದಂತಾಗಿದೆ. ಇಲ್ಲಿ ನಡೆದು ಹೋಗುವಾಗ ಅಥವಾ ವಾಹನಗಳಲ್ಲಿ ಸಾಗುವಾಗ ದುರ್ವಾಸನೆ ಮೂಗಿಗೆ ಬಡಿಯುತ್ತಿದೆ. ಪಾಳುಬಿದ್ದ ಮನೆಯಲ್ಲಿ ಅನೈತಿಕ ಚಟುವಟಿಕೆ! ಮಠದಗುಡ್ಡೆ ಸೈಟ್‌ನಲ್ಲಿ ತ್ಯಾಜ್ಯ ತುಂಬಿರುವ ರಸ್ತೆ ಪಕ್ಕದಲ್ಲಿ ಸುಸಜ್ಜಿತವಾಗಿದ್ದರೂ ಕಿಟಕಿ ಬಾಗಿಲು ಮುರಿದಿರುವ ಹಳೆಯ ಪಾಳು ಮನೆಯೊಂದಿದೆ. ಪಂಚಾಯಿತಿ ಕಚೇರಿಗೆ ಅನತಿ ದೂರದಲ್ಲಿರುವ ಈ ಮನೆ ಸಂಜೆಯಾಗುತ್ತಲೇ ನಾನಾ ರೀತಿಯ ಅನೈತಿಕ ಚಟುವಟಕೆ ತಾಣವಾಗಿ ವಾರ್ಪಡುತ್ತಿದೆ. ಮನೆಯೊಳಗೆ ತುಂಬಿರುವ ತ್ಯಾಜ್ಯ ವಸ್ತುಗಳು ಇಲ್ಲೇನು ನಡೆಯುತ್ತಿದೆ ಎಂಬುದಕ್ಕೆ ಹಿಡಿದ ಕನ್ನಡಿಯಂತಿದೆ. ಸಂಜೆಯಾದರೆ ಮಠದಗುಡ್ಡೆ ಒಳರಸ್ತೆಯಲ್ಲಿ ವಾಹನ ಸಂಚಾರ ಭೀತಿದಾಯಕವಾಗಿದೆ. ಹಿಂದೊಮ್ಮೆ ಈ ಬಗ್ಗೆ ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿದ್ದು, ಪಂಚಾಯಿತಿ ಆಡಳಿತ ಈವರೆಗೂ ಪಾಳು ಮನೆಯ ಸದ್ವಿನಿಯೋಗಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ. ಇತ್ತ ಗಮನಹರಿಸಿ ಕ್ರಮಕ್ಕೆ ಮುಂದಾಗಿ ಒಳ ರಸ್ತೆಗೆ ಹತ್ತಿರದಲ್ಲೇ ಪಂಚಾಯಿತಿ ಕಚೇರಿ ಇದ್ದರೂ ಸ್ಥಳೀಯರ ನಿತ್ಯದ ಕಷ್ಟಕ್ಕೆ ಸ್ಪಂದನೆ ಇಲ್ಲದಂತಾಗಿದೆ. ಕತ್ತಲಾದ ಮೇಲೆ ವಾಹನ ಚಾಲಕರು ಇಲ್ಲಿ ತ್ಯಾಜ್ಯ ಎಸೆಯುತ್ತಾರೆ. ರಸ್ತೆಯ ಬದಿಯಿಂದ ಗುಡ್ಡದ ಕೆಳಗೆ ತ್ಯಾಜ್ಯ ರಾಶಿ ಬಿದ್ದಿದ್ದು, ಇದು ರಸ್ತೆಯನ್ನೂ ಆವರಿಸಿದೆ. ಇಲ್ಲಿ ವಾಸಿಸುವುದೇ ಕಷ್ಟಕರವೆನಿಸಿದೆ. ಬೀದಿದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಇಲ್ಲಿರುವ ಪಾಳು ಮನೆಯೊಂದು ಸ್ಥಳೀಯರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಪಂಚಾಯಿತಿ ಆಡಳಿತ ಇನ್ನಾದರೂ ಇತ್ತ ಗಮನಹರಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯರೊಬ್ಬರು ಮನವಿ ಮಾಡಿದ್ದಾರೆ.
ಮಠದಗುಡ್ಡೆ ಸೈಟ್ ರಸ್ತೆಯಲ್ಲಿ ತುಂಬಿರುವ ತ್ಯಾಜ್ಯದ ಬಗ್ಗೆ ಪಂಚಾಯಿತಿ ಆಡಳಿತದೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಸಾರ್ವಜನಿಕ ಸ್ಥಳಗಳಲ್ಲಿ ತುಂಬಿರುವ ತ್ಯಾಜ್ಯ ವಿಲೇವಾರಿಯಾಗಬೇಕು. ಈ ನಿಟ್ಟಿನಲ್ಲಿ ಪಂಚಾಯಿತಿ ಆಡಳಿತದೊಂದಿಗೆ ಮತ್ತೊಂದು ಬಾರಿ ಚರ್ಚಿಸಿ, ವಾರದೊಳಗೆ ತ್ಯಾಜ್ಯ ವಿಲೇವಾರಿಗೆ ಪ್ರಯತ್ನಿಸುವೆ. - ರಾಜೇಶ್ ಸುವರ್ಣ ಗುರುಪುರ ಮಠದಗುಡ್ಡೆ ವಾರ್ಡ್‌ನ ಪಂಚಾಯಿತಿ ಸದಸ್ಯ