ಚಿಕ್ಕಬಳ್ಳಾಪುರ: ಸೊಂಟದಲ್ಲಿ ಚಾಕು ಇರಿಸಿಕೊಂಡು ಜನರ ಗುಂಪಿನಲ್ಲಿ ಅನುಮಾನಾಸ್ಪದವಾಗಿ ಸಚಿವರತ್ತ ಧಾವಿಸಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಇಂದು ಈ ಪ್ರಕರಣ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಮಾರಕಾಸ್ತ್ರ ಹಿಡಿದುಕೊಂಡು ಸಚಿವರತ್ತ ನುಗ್ಗಿದ್ದು ಪೊಲೀಸರ ಚುರುಕುಮತಿಯ ಕ್ಷಿಪ್ರ ಪ್ರತಿಕ್ರಿಯೆಯಿಂದಾಗಿ ತಪ್ಪಿಹೋಗಿದೆ. ಈ ಸಂಬಂಧ ಗಂಗರಾಜು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಇಂದು ಈ ಗ್ರಾಮದಲ್ಲಿ ಕಾರು ಏರಿ ಹೊರಡಲು ಅನುವಾದ ಸಂದರ್ಭದಲ್ಲಿ ಜನರ ಗುಂಪಿನಲ್ಲಿ ಈ ವ್ಯಕ್ತಿ ಅವರತ್ತ ಧಾವಿಸಿದ್ದ. ಆಗ ಈತನ ಹೊಟ್ಟೆಗೆ ಪೊಲೀಸರೊಬ್ಬರ ಕೈ ತಾಕಿದಾಗ ಒಳಗೆ ಸಿಕ್ಕಿಸಿಕೊಂಡಿದ್ದ ಡ್ರ್ಯಾಗನ್ ಚಾಕು ತಾಕಿದೆ. ಆಗ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಅಟ್ರಾಸಿಟಿ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಗಲಾಟೆಯಾಗಿತ್ತು. ಹೀಗಾಗಿ ಸವರ್ಣೀಯ ವ್ಯಕ್ತಿ ಈತನಿಗೆ ಬೆದರಿಕೆ ಹಾಕಿದ್ದು, ಟ್ರ್ಯಾಕ್ಟರ್ ಹತ್ತಿಸಿ ಸಾಯಿಸುವುದಾಗಿ ಹೆದರಿಸಿದ್ದ. ಅದೇ ಕಾರಣಕ್ಕೆ ಈತ ಪ್ರಾಣಭಯದಿಂದ ಚಾಕು ಇಟ್ಟುಕೊಂಡು ಓಡಾಡುತ್ತಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ. ಬಂಧಿತ ವ್ಯಕ್ತಿ ಸಚಿವರ ಬೆಂಬಲಿಗನಾಗಿಯೂ ಗುರುತಿಸಿಕೊಂಡಿದ್ದು, ಗುಡಿಬಂಡೆ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.