ಜಿಲ್ಲೆ

ವಿಷದ ಬಾಟಲಿ ಹಿಡಿದು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ರೈತರು!

arunakunigal

ಪಾವಗಡ: ಜಮೀನಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ ಪಳವಳ್ಳಿ ರೈತರು ನಾಗಲಮಡಿಕೆಯಿಂದ ಕೋಟಗುಡ್ಡದವರೆಗೆ ಟವರ್​ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಾಮಗಾರಿಗೆ ಅಡ್ಡಿಪಡಿಸಿದ್ದಲ್ಲದೇ ವಿಷದ ಬಾಟಲಿಗಳನ್ನು ಹಿಡಿದುಕೊಂಡು ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದು, ಕೆಲ ಕಾಲ ಆತಂಕ ಸೃಷ್ಟಿಸಿತು.

ಕೆಪಿಟಿಸಿಎಲ್​ನಿಂದ ನಡೆಯುತ್ತಿರುವ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿರುವ ಏಟ್ರಿಯಾ ಕಂಪನಿ ಸೂಕ್ತ ಪರಿಹಾರ ನೀಡದೇ ಕಾಮಗಾರಿ ಆರಂಭಿಸಿಲು ಬಂದಿದ್ದು ರೈತರನ್ನು ಕೆರಳಿಸಿತು.

ಪೊಲೀಸ್​ ಬಂದೋಬಸ್ತ್​ನೊಂದಿಗೆ ಟವರ್​ ನಿರ್ಮಾಣಕ್ಕೆ ಮುಂದಾದಾಗ ರೈತರು ವಿಷದ ಬಾಟಲಿಗಳನ್ನು ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿ ಆತಂಕ ಸೃಷ್ಟಿಸಿದರು.

ಸಿಪಿಐ ಲಕ್ಷ್ಮೀಕಾಂತ್​ ಮತ್ತು ಕಾಂತರೆಡ್ಡಿ ಹಾಗೂ 4 ಠಾಣೆಗಳ ಪೊಲೀಸ್​ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಾಮಗಾರಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದರೂ, ಒಪ್ಪದ ರೈತರು ಹಾಲಿ ನಿಗದಿಪಡಿಸಿದ ಪರಿಹಾರ ವಿತರಿಸಿ ಕಾಮಗಾರಿ ಅರಂಭಿಸಬೇಕು ಎಂದು ಪಟ್ಟುಹಿಡಿದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ತಾಲೂಕಿನ ಸೋಲಾರ್​ ನಿರ್ಮಾಣದ ನಂತರ ವಿದ್ಯುತ್​ ಟವರ್​ಗಳನ್ನು ಖಾಸಗಿ ಜಮೀನುಗಳಲ್ಲಿ ನಿರ್ಮಾಣ ಮಾಡುತ್ತಿದ್ದು, ಗುತ್ತಿಗೆ ಪಡೆದುಕೊಂಡ ಕಂಪನಿಗಳು ರೈತರಿಗೆ ಸೂಕ್ತ ಪರಿಹಾರ ನೀಡದೆ ಮೋಸ ಮಾಡುತ್ತಿವೆ ಎಂದು ರೈತರು ಆಕ್ರೋಶ ಹೊರ ಹಾಕಿದರು.

ರೈತರಾದ ಪಿ.ವೈ.ಶ್ರೀನಿವಾಸ 58 ಗುಂಟೆ, ಸುಶೀಲಮ್ಮ 39 ಗುಂಟೆ, ಸ.ನಂ.275/2ರಲ್ಲಿ ನರಸಿಂಹಪ್ಪ ಜಮೀನಿನಲ್ಲಿ 48 ಗುಂಟೆ, ಸ.ನಂ.278ರಲ್ಲಿ 20 ಗುಂಟೆ, ಓಬಳಮ್ಮ ಜಮೀನಿನಲ್ಲಿ 27 ಗುಂಟೆ, ರಾಮು 23 ಗುಂಟೆ, ಕೆ.ಎನ್​. ನರಸಿಂಹಮೂರ್ತಿ 9 ಗುಂಟೆ ಜಮೀನಿನಲ್ಲಿ ಟವರ್​ ನಿರ್ಮಾಣಕ್ಕೆ ಗುರುತಿಸಿದ್ದು, 4 ವರ್ಷಗಳ ಹಿಂದೆ 1 ಗುಂಟೆಗೆ 5 ಸಾವಿರ, ಕಾರಿಡಾರ್​ಗೆ 44 ಸಾವಿರ ರೂಪಾಯಿ ದರ ನಿಗದಿಪಡಿಸಲಾಗಿತ್ತು. ಆದರೆ 4 ವರ್ಷ ಕಳೆದರೂ ಕಾನೂನಾತ್ಮಕವಾಗಿ ಭೂಸ್ವಾದೀನ ಮಾಡಿಕೊಂಡಿಲ್ಲ ಹಾಗೂ ಪರಿಹಾರವನ್ನೂ ನೀಡಿಲ್ಲ. "ಅಂದಿನ ದರದಲ್ಲೇ ಟವರ್​ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ಭೂಮಿ ಬೆಲೆ ಹೆಚ್ಚಾಗಿದ್ದು, ಉಪಗುತ್ತಿಗೆ ಪಡೆದುಕೊಂಡ ಅನ್ನದಾನಪುರ ರವಿ ರೈತರಿಗೆ ಸಿಗುತ್ತಿಲ್ಲ, ಇತರ ರೈತರ ಜಮೀನಿನಲ್ಲಿ ಕಾಮಗಾರಿ ಮಾಡಿ ಹಣ ನೀಡದೆ ಮೊಬೈಲ್​ ಕರೆ ಸ್ವೀಕರಿಸದೆ ಓಡಾಡುತ್ತಿದ್ದು, ಇವರ ಮೇಲೆ ನಮಗೆ ನಂಬಿಕೆ ಇಲ್ಲ. ಜಿಲ್ಲಾಧಿಕಾರಿಗಳು ನೂರಾರು ಪೊಲೀಸರನ್ನು ಸ್ಥಳಕ್ಕೆ ಕಳುಹಿಸಿ, ಬಲವಂತವಾಗಿ ರೈತರ ಭೂಮಿ ವಶಪಡಿಸಿಕೊಂಡರೆ, ನಮ್ಮ ಜೀವಹೋದರೂ ಭೂಮಿ ಕೊಡುವುದಿಲ್ಲ. ನಿಮಗೆ ಭೂಮಿ ಬೇಕೇಬೇಕು ಎಂದಲ್ಲಿ ನಮಗೆ ವಿಷ ನೀಡಿ, ಭೂಮಿ ಪಡೆಯಿರಿ' ಎಂದು ಪಿ.ವೈ.ಶ್ರೀನಿವಾಸ್​, ಸುಶೀಲಮ್ಮ ಎಂಬುವವರು ಆಕ್ರೋಶ ವ್ಯಕ್ತಪಡಿಸಿದರು.

ಕುಸಿದುಬಿದ್ದ ರೈತ: ಮೂತ್ರಪಿಂಡ ಸಮಸ್ಯೆಯಿಂದ ನರಳುತ್ತಿದ್ದ ರೈತ ರೈತ ಯರ್ರಿಸ್ವಾಮಿ ಪ್ರತಿಭಟನಾನಿರತ ಸ್ಥಳದಲ್ಲೇ ಕುಸಿದು ಬಿದ್ದಿದ್ದರಿಂದ ತಕ್ಷಣ ಅಂಬುಲೆನ್ಸ್​ನಲ್ಲಿ ಪಾವಗಡ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್​ ಕೆ.ಆರ್​.ನಾಗರಾಜು ಏಟ್ರಿಯಾ ಕಂಪನಿಯ ಸಿಬ್ಬಂದಿ ಜತೆ ಮಾತನಾಡಿದರು. ನಂತರ ಗುತ್ತಿಗೆದಾರ ಅನ್ನದಾನಪುರದ ರವಿ ಅವರನ್ನು ಸ್ಥಳಕ್ಕೆ ಕರೆಯಿಸಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹೆಲ್ಪ್​ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್​, ಭೂಮಿ ಕಳೆದುಕೊಳ್ಳುತ್ತಿರುವ ರೈತರಾದ ನರಸಿಂಹಪ್ಪ, ಓಬಳೇಶ, ಮೂರ್ತಿ, ಓಬಳಮ್ಮ, ರಾಮು, ಕೆ.ಎನ್​.ನರಸಿಂಹಮೂರ್ತಿ ಉಪಸ್ಥಿತರಿದ್ದರು.