ಮಂಡ್ಯ: ನಿಷೇಧವಿದ್ದರೂ ಕೆಆರ್ಎಸ್ ಹಿನ್ನೀರಲ್ಲಿ ಮೋಜು ಮಸ್ತಿಗೆ ಬಂದಿದ್ದ ನಾಲ್ವರು ಯುವಕರು ಮತ್ತು ನಾಲ್ವರು ಯುವತಿಯರ ಮೇಲೆ ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳಿಂದ 2 ಕಾರನ್ನು ಸೀಜ್ ಮಾಡಲಾಗಿದೆ.
ಕರೊನಾ ಲಾಕ್ಡೌನ್ ಜಾರಿಯಲ್ಲಿದ್ದರೂ ಲೆಕ್ಕಿಸದೆ ಮೈಸೂರು ಮೂಲದ ಯುವಕರ ತಂಡ ಯುವತಿಯರೊಂದಿಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಹಿನ್ನಿರಿನ ಬಳಿ ಪಾರ್ಟಿ ಮಾಡಲು ಬಂದಿತ್ತು. ಅಲ್ಲಿಗೆ ಬಂದ ಕೆಆರ್ಎಸ್ ಭದ್ರತಾ ಪಡೆ ಪೊಲೀಸರು, ಯುವಕರ ಮೋಜು-ಮಸ್ತಿಗೆ ಬ್ರೇಕ್ ಹಾಕಿದ್ದರು. ಈ ವೇಳೆ ಪೊಲೀಸರಿಗೆ ಅವಾಜ್ ಹಾಕಿ ಬೆದರಿಕೆ ಹಾಕಿದ್ದು, ಈ ಪ್ರಕರಣವನ್ನು ಮುಚ್ಚಿಹಾಕಲು ಹಿರಿಯ ಪೊಲೀಸ್ ಅಧಿಕಾರಿ ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಇದೀಗ ಈ ಪ್ರಕರಣ ಸಂಬಂಧ ಎಂಟು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಲಾಕ್ಡೌನ್ ನಡುವೆ ಜಿಲ್ಲಾ ಗಡಿ ದಾಟಿ ಬಂದಿದ್ದಲ್ಲದೆ, ನಿಷೇಧವಿದ್ದರೂ ಕೆಆರ್ಎಸ್ ಹಿನ್ನೀರು ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿ ಅಲ್ಲಿಯೇ ಮದ್ಯಪಾನ ಮಾಡಿದ್ದಾರೆ ಎಂಬ ಆರೋಪ ಈ ಯುವ ತಂಡ ಮೇಲಿದೆ.