ಜಿಲ್ಲೆ

ಇಂದಿನಿಂದಲೇ ನೈಟ್ ಕರ್ಫ್ಯೂ, ನಿಯಮ ಉಲ್ಲಂಘಿಸಿದ್ರೆ ಕೇಸ್​! ಟೈಟ್​ ರೂಲ್ಸ್​ ನಡುವೆ ಕೆಲವರಿಗಿದೆ ರಿಯಾಯ್ತಿ

ಬೆಂಗಳೂರು: ಕರೊನಾ ಮತ್ತು ಒಮಿಕ್ರಾನ್​ ಸೋಂಕು ಹರಡುವಿಕೆ ನಿಯಂತ್ರಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇಂದಿನಿಂದಲೇ ನೈಟ್​ ಕರ್ಫ್ಯೂ ಜಾರಿಯಾಗಲಿದೆ. ಒಂದೆಡೆ ಜನರನ್ನು ಸೇರಿಸಿ ಹೊಸ ವರ್ಷಾಚರಣೆಯನ್ನೂ ಮಾಡುವಂತಿಲ್ಲ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್​ ಕರ್ಫ್ಯೂ ನಿಯಮ ಜಾರಿಯಾಗಲಿದ್ದು, ಡಿ.28ರಿಂದ 10 ದಿನಗಳ ಕಾಲ ಟೈಟ್​ ರೂಲ್ಸ್​ ಇರಲಿದೆ. ಈ ವೇಳೆ ಯಾರಾದರೂ ನಿಯಮ ಉಲ್ಲಂಘಿಸಿದ್ರೆ ಅಂತಹವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್​ಡಿಎಂಎ) ಅಡಿ ಮೊಕದ್ದಮೆ ದಾಖಲಿಸಲಾಗುತ್ತೆ ಎಂದು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ಆದೇಶದಲ್ಲಿ ವಿನಾಯಿತಿ ನೀಡಿರುವವರಿಗೆ ಓಡಾಟ ಮಾಡಲು ಅವಕಾಶವಿರುತ್ತದೆ. ಬಸ್​, ಕ್ಯಾಬ್​ ಸೇವೆಯೂ ಇರಲಿದೆ. ಆದರೆ, ಎಲ್ಲ ಭಾಗಗಳಲ್ಲೂ ನಾಕಾಬಂದಿ ಮಾಡಲಾಗುತ್ತದೆ. ಪೊಲೀಸರು ಎಲ್ಲೆಡೆ ಗಸ್ತು ತಿರುಗಲಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕೇಸ್​ ದಾಖಲಿಸುತ್ತಾರೆ. ಪಬ್​, ಬಾರ್​ ಆ್ಯಂಡ್​ ರೆಸ್ಟೋರೆಂಟ್​ಗಳು ರಾತ್ರಿ 10 ಗಂಟೆಗೆ ಬಂದ್​ ಮಾಡಬೇಕು. ಹೊಸ ವರ್ಷದ ಸಂಭ್ರಮಾಚರಣೆಗಾಗಿ ಸಾರ್ವಜನಿಕ ಸ್ಥಳದಲ್ಲಿ ಜನ ಸೇರುವಂತಿಲ್ಲ. ಆಸ್ಪತ್ರೆಗೆ ಹೋಗುವವರು ದಾಖಲೆ ತೋರಿಸಿ ಹೋಗಬಹುದು. ಪ್ರಯಾಣಿಕರು ಟಿಕೆಟ್​ ತೋರಿಸಬೇಕು. ಈ ಬಾರಿ ಯಾವುದೇ ಪಾಸ್​ ಕೊಡುವುದಿಲ್ಲವಾದರೂ ಕೆಲವರ ಓಡಾಟಕ್ಕೆ ವಿನಾಯಿತಿ ಇದೆ. ಆ ಮಾಹಿತಿ ಇಲ್ಲಿದೆ.

ನೈಟ್​ ಕರ್ಫ್ಯೂ ವೇಳೆ ಯಾರಿಗೆಲ್ಲ ವಿನಾಯಿತಿ?

  • ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳು ಮತ್ತು ಅವರ ಸಹಾಯಕರು ಸಂಚರಿಸಬಹುದು.
  • ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕೈಗಾರಿಕೆಗಳು ಅಥವಾ ಕಂಪನಿಗಳ ಕೆಲಸಗಾರರು.
  • ಟೆಲಿಕಾಂ ಮತ್ತು ಇಂಟರ್​ನೆಟ್​ ಸೇವಾ ಪೂರೈಕೆದಾರರ ಉದ್ಯೋಗಿಗಳು ಮತ್ತು ಅವರ ವಾಹನಗಳು.
  • ಐಟಿ ಕಂಪನಿಗಳ ಅಗತ್ಯ ಸಿಬ್ಬಂದಿ.
  • ವೈದ್ಯಕೀಯ, ತುರ್ತು ಮತ್ತು ಅಗತ್ಯ ಸೇವೆಗಳು, ಮೆಡಿಕಲ್​ ಅಂಗಡಿ ಸಿಬ್ಬಂದಿ ಕಾರ್ಯ ನಿರ್ವಹಿಸಬಹುದು.
  • ಎಲ್ಲ ರೀತಿಯ ಸರಕು ವಾಹನ, ಖಾಲಿ ವಾಹನ, ಇ-ಕಾಮರ್ಸ್​, ಹೋಂ ಡೆಲಿವರಿಗೆ ಅವಕಾಶ.
  • ಬಸ್​, ರೈಲು, ಮೆಟ್ರೋ ರೈಲು ಸೇವೆ ಮತ್ತು ವಿಮಾನ ಸಂಚಾರ ಇರಲಿದೆ.
  • ವಿಮಾನ ನಿಲ್ದಾಣ, ಬಸ್​ ನಿಲ್ದಾಣ, ರೈಲುನಿಲ್ದಾಣಕ್ಕೆ ತೆರಳಲು ಹಾಗೂ ಅಲ್ಲಿಂದ ಮನೆಗೆ ಹಿಂದಿರುಗಲು ಸಾರ್ವಜನಿಕರು ಖಾಸಗಿ ವಾಹನ, ಸಾರ್ವಜನಿಕ ಸಾರಿಗೆ ಹಾಗೂ ಬಾಡಿಗೆ ಟ್ಯಾಕ್ಸಿಗಳನ್ನು ಬಳಸಬಹುದು.