ಜಿಲ್ಲೆ

ಬಂಟ್ವಾಳದಲ್ಲಿ ಎಸ್‌ಡಿಪಿಐ ಮುಖಂಡನ ಮನೆ ಮೇಲೆ ಎನ್ಐಎ ದಾಳಿ

ಮಂಗಳೂರು: ಬಿಹಾರದ ಪುಲ್ವಾರಿ ಷರೀಫ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು, ಗುರುವಾರ ಬೆಳ್ಳಂಬೆಳಗ್ಗೆ ದ‌ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಎಸ್‌ಡಿಪಿಐ-ಪಿಎಫ್ಐ ಮುಖಂಡ ರಿಯಾಜ್ ಫರಂಗಿಪೇಟೆ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಬಂಟ್ವಾಳದ ಬಿಸಿ ರೋಡ್​ನಲ್ಲಿರುವ ರಿಯಾಜ್ ಪರಂಗಿಪೇಟೆಯ ಮನೆ ಮೇಲೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ರಿಯಾಜ್​ರ ಮೊಬೈಲ್ ಅನ್ನು ವಶಕ್ಕೆ ಪಡೆದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ರಿಯಾಜ್​ರನ್ನ ವಿಚಾರಣೆ ಮಾಡುತ್ತಿದ್ದಾರೆ.

ಕಳೆದ ಜು.15 ರಂದು ಬಿಹಾರದಲ್ಲಿ ಅಖ್ತರ್ ಫರ್ವೇಜ್ ಮತ್ತು ಮಹಮದ್ ಜಲಾಲುದ್ದೀನ್ ಎಂಬ ಇಬ್ಬರನ್ನು ಬಿಹಾರ ಎಟಿಎಸ್​ನಿಂದ ಬಂಧಿಸಲಾಗಿದೆ. ಇವರಿಬ್ಬರ ಜತೆ ರಿಯಾಜ್ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಮೇರೆಗೆ ಎನ್​ಐಎ ದಾಳಿ ಮಾಡಿದೆ.

ರಿಯಾಜ್ ಪರಂಗಿಪೇಟೆಯ ಮನೆ ಮೇಲೆ ಎನ್‌ಐಎ ದಾಳಿ ಮಾಡಿದ್ದನ್ನು ಖಂಡಿಸಿ ಎಸ್‌ಡಿಪಿಐ-ಪಿಎಫ್ಐ ಕಾರ್ಯಕರ್ತರು 'ಎನ್ಐಎ ಗೋ ಬ್ಯಾಕ್' ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಬಂಟ್ವಾಳ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.