|ಅವಿನಾಶ್ ಜೈನಹಳ್ಳಿ ಮೈಸೂರು
'ಪ್ರವಾಸೋದ್ಯಮ ನಗರಿ' ಮೈಸೂರಿನ ಪ್ರತಿಷ್ಠಿತ ಮತ್ತು ಐಷಾರಾಮಿ ಹೋಟೆಲ್ 'ಲಲಿತ ಮಹಲ್ ಪ್ಯಾಲೇಸ್' ಖಾಸಗೀಕರಣಕ್ಕೆ ಸರ್ಕಾರ ಮತ್ತೆ ಕಾರ್ಯಪ್ರವೃತ್ತವಾಗಿದೆ.
ಮೈಸೂರು ಮಹಾರಾಜರು ಸ್ಥಾಪಿಸಿರುವ ಹಾಗೂ ಪ್ರವಾಸಿಗರಿಗೆ ಪಾರಂಪರಿಕ ಅನುಭವ ನೀಡುವ ಲಲಿತ ಮಹಲ್ ಪ್ಯಾಲೇಸ್ ಈಗಷ್ಟೇ ಶತಮಾನೋತ್ಸವ ಸಂಭ್ರಮದಲ್ಲಿ ಮಿಂದೆದ್ದಿದೆ. 1920ರಲ್ಲಿ ಭಾರತದ ವೈಸ್ರಾಯ್ ಅವರಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 'ಲಲಿತ ಮಹಲ್ ಪ್ಯಾಲೇಸ್' ನಿರ್ಮಾಣ ಮಾಡಿದ್ದರು. ಸದ್ಯ ಸರ್ಕಾರದ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ (ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ಸ್) ಅಡಿ ಲಾಭದಾಯಕ ಪಂಚತಾರಾ ಹೋಟೆಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷ ಹತ್ತಾರು ಕೋಟಿ ರೂ. ಆದಾಯ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ಆದರೆ, ಈ ಹೋಟೆಲ್ ಖಾಸಗೀಕರಣ ಯತ್ನಕ್ಕೆ ಸರ್ಕಾರ ಮತ್ತೆ ಮುಂದಾಗಿದೆ. ಅದರಂತೆ, ಹೋಟೆಲ್ ನಿರ್ವಹಣೆ ಜವಾಬ್ದಾರಿಯನ್ನು ತಾಜ್ ಗ್ರೂಪ್ಗೆ ನೀಡುವ ಸಂಬಂಧ ಜೂ. 14ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿ ಸಭೆ ಆಯೋಜಿಸಲಾಗಿದೆ. ಅಂದಿನ ಸಭೆಯಲ್ಲಿ ಸಮ್ಮತಿ ದೊರೆತರೆ ಲಲಿತ ಮಹಲ್ ಪ್ಯಾಲೇಸ್ ಆಡಳಿತ ಖಾಸಗಿಯವರ ಪಾಲಾಗಲಿದೆ.
ರಾಜಮಹಾರಾಜರ ಕಾಲದ ವೈಭವ, ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಲಲಿತ ಮಹಲ್ ಪ್ಯಾಲೇಸ್ನಲ್ಲಿ ಕಾಲ ಕಳೆಯುವುದೇ ರೋಮಾಂಚನಕಾರಿ ಅನುಭವ. ಈ ಹೋಟೆಲ್ಗೆ ವಿದೇಶಿ ಪ್ರವಾಸಿಗರೇ ಹೆಚ್ಚಾಗಿ ಬರುತ್ತಾರೆ. ಬೇಸಿಗೆ, ದಸರಾ ಮತ್ತು ವಾರಾಂತ್ಯದಲ್ಲಿ ಹೋಟೆಲ್ ತುಂಬಿರುತ್ತದೆ. ಉಳಿದ ದಿನಗಳಲ್ಲೂ ಬಹುತೇಕ ಭರ್ತಿಯಾಗಿರುತ್ತದೆ. ಗತಕಾಲದ ವೈಭವ ಹೊಂದಿರುವ 'ಲಲಿತ ಮಹಲ್ ಪ್ಯಾಲೇಸ್' ನೋಡಲು ಮತ್ತು ಅಲ್ಲಿ ಕಾಫಿ ಕುಡಿಯಲು ಸ್ಥಳೀಯರು ಕೂಡ ಹೋಗುವುದು ವಿಶೇಷ.
ಹಿಂದೆಯೂ ಪ್ರಯತ್ನ ನಡೆದಿತ್ತು!: ಅರಮನೆಯಾಗಿದ್ದ ಲಲಿತ ಮಹಲ್ 1973ರಲ್ಲಿ ರಾಜ್ಯ ಸರ್ಕಾರದ ಸುಪರ್ದಿಗೆ ಬಂತು. ಆ ಸಂದರ್ಭ ಸರ್ಕಾರ ಲಲಿತ ಮಹಲ್ನಲ್ಲಿ ಹೋಟೆಲ್ ನಡೆಸುವ ಅಧಿಕಾರವನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಿತು. ಆದರೆ, ಪ್ರವಾಸೋದ್ಯಮ ಇಲಾಖೆ ಲಲಿತ ಮಹಲ್ ಅನ್ನು ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಐಟಿಡಿಸಿ)ದ ಸುಪರ್ದಿಗೆ ವಹಿಸಿತು. ಆಗ ಹೋಟೆಲ್ನಲ್ಲಿ 24 ಕೊಠಡಿಗಳು ಮಾತ್ರ ಇದ್ದವು. ಐಟಿಡಿಸಿಯ ಸುಪರ್ದಿಗೆ ಬಂದ ನಂತರ ಕೊಠಡಿಗಳ ಸಂಖ್ಯೆಯನ್ನು 30ಕ್ಕೆ ಏರಿಕೆ ಮಾಡಲಾಯಿತು.
ಬಳಿಕ ಅನೇಕ ವರ್ಷಗಳ ಕಾಲ ಐಟಿಡಿಸಿಯೇ ಲಲಿತ ಮಹಲ್ ನಿರ್ವಹಣೆ ಮಾಡಿತ್ತು. ಆಗಲೂ ಲಲಿತ ಮಹಲ್ನಿಂದ ಪ್ರತಿ ವರ್ಷ ಹತ್ತಾರು ಕೋಟಿ ರೂ. ಲಾಭವಾಗುತ್ತಿತ್ತು. ಆದರೂ, ಐಟಿಡಿಸಿ ದೇಶಾದ್ಯಂತ ನಡೆಸುತ್ತಿದ್ದ ಹೋಟೆಲ್ಗಳಲ್ಲಿ 16 ಹೋಟೆಲ್ಗಳು ನಷ್ಟದಲ್ಲಿವೆ ಎಂದು ಲಲಿತ ಮಹಲ್ ಹೋಟೆಲ್ ಸೇರಿದಂತೆ ಒಟ್ಟು 8 ಹೋಟೆಲ್ಗಳ ಖಾಸಗೀಕರಣಕ್ಕೆ ಮುಂದಾಗಿತ್ತು. ಆದರೆ ವಿರೋಧದ ನಡುವೆ ಖಾಸಗೀಕರಣದಿಂದ ದೂರ ಸರಿಯಿತು.
ಖಾಸಗೀಕರಣಕ್ಕೆ ಮುಂದಾಗಿದ್ದ ಕೇಂದ್ರ ಸರ್ಕಾರದ ನಡೆಯನ್ನು ಅಂದಿನ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ವಿರೋಧಿಸಿದ್ದರು. ರಾಜ್ಯ ಸರ್ಕಾರವೇ ಹೋಟೆಲ್ ನೋಡಿಕೊಳ್ಳಲು ಸಿದ್ಧವಿದ್ದು, ನಮ್ಮ ಆಸ್ತಿಯನ್ನು ಮಾರುವ ಹಕ್ಕು ಕೇಂದ್ರ ಸರ್ಕಾರಕ್ಕೆ ಇಲ್ಲ. ನಮ್ಮ ಪರಂಪರೆಯ, ಹೆಮ್ಮೆಯ ಲಲಿತ ಮಹಲ್ ನವೀಕರಿಸಿ ನಾವೇ ನಿರ್ವಹಣೆ ಮಾಡುತ್ತೇವೆಂದು ಅವರು ಕೇಂದ್ರಕ್ಕೆ ಪತ್ರ ಬರೆದಿದ್ದರು. ಜತೆಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಹೋರಾಟಗಾರರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಕೇಂದ್ರ ಸರ್ಕಾರ ಖಾಸಗೀಕರಣ ಕೈಬಿಟ್ಟು 2017-18ರಲ್ಲಿ ಲಲಿತ ಮಹಲ್ ನಿರ್ವಹಣೆಯನ್ನು ಮತ್ತೆ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ನೀಡಿತು. ಆದರೀಗ ರಾಜ್ಯ ಸರ್ಕಾರವೇ ಲಲಿತ ಮಹಲ್ ಖಾಸಗೀಕರಣ ಮಾಡಲು ಮುಂದಾಗಿದೆ.
ಸಿನಿಮಾ ರಂಗಕ್ಕೆ ನಂಟು: ಲಲಿತ ಮಹಲ್ ಪ್ಯಾಲೇಸ್ಗೂ ಭಾರತೀಯ ಚಿತ್ರರಂಗಕ್ಕೂ ಎಲ್ಲಿಲ್ಲದ ನಂಟು. ಬಹುತೇಕ ಭಾರತೀಯ ಭಾಷೆಗಳ ಸಿನಿಮಾ ಚಿತ್ರೀಕರಣ ಇಲ್ಲಿ ನಡೆದಿದೆ. ಲಲಿತ ಮಹಲ್ನಲ್ಲಿ ಚಿತ್ರೀಕರಣ ನಡೆಸುವುದೆಂದರೆ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಖುಷಿಯ ವಿಚಾರ ಮತ್ತು ಪ್ರತಿಷ್ಠೆಯ ಸಂಗತಿ. ಈವರೆಗೆ 650ಕ್ಕೂ ಹೆಚ್ಚು ಸಿನಿಮಾಗಳು ಚಿತ್ರೀಕರಣಗೊಂಡಿರುವುದು ಇಲ್ಲಿನ ವಿಶೇಷ. ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್ ಅವರ ಬಹುತೇಕ ಸಿನಿಮಾಗಳ ಚಿತ್ರೀಕರಣ ಇಲ್ಲಿಯೇ ನಡೆದಿದೆ.
ಕಲಾಂ ವಾಸ್ತವ್ಯ: ರಾಷ್ಟ್ರಪತಿಯಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು "ಸಾಂಸ್ಕೃತಿಕ ನಗರಿ' ಮೈಸೂರಿನೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅಂತೆಯೇ, 2010ರಲ್ಲಿ ಜೆಎಸ್ಎಸ್ ಸಂಸ್ಥೆಯ ಸಮಾರಂಭಕ್ಕೆ ಬಂದಿದ್ದಾಗ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ನ ರೂಂ. ನಂ. 222ರಲ್ಲಿ ವಾಸ್ತವ್ಯ ಹೂಡಿದ್ದರು. ಕಲಾಂ ಅವರು ಭಗವದ್ಗೀತೆ, ಕುರಾನ್, ಬೈಬಲ್ ಗ್ರಂಥಗಳನ್ನು ನಿತ್ಯವೂ ಓದುವ ಹವ್ಯಾಸ ಹೊಂದಿದ್ದರು. ಆದರೆ ಅವರ ವಾಸ್ತವ್ಯದ ಸಂದರ್ಭ ಲಲಿತಮಹಲ್ ಹೋಟೆಲ್ನಲ್ಲಿ ಆ ಗ್ರಂಥಗಳು ಇರಲಿಲ್ಲ. ಆದಕಾರಣ, ತಮ್ಮ ಸಹಾಯಕರ ಮೂಲಕ ಅವರೇ ಪವಿತ್ರ ಗ್ರಂಥಗಳನ್ನು ತರಿಸಿಕೊಂಡಿದ್ದರು. ಓದಿದ ಬಳಿಕ ಅವುಗಳನ್ನು ಇಲ್ಲಿಯೇ ಬಿಟ್ಟು ಹೋಗಿದ್ದರು.
ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ನ್ನು ತಾಜ್ ಗ್ರೂಪ್ಗೆ ನೀಡುವ ಸಂಬಂಧ ಜೂ.14ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯ ಸಭೆ ಆಯೋಜಿಸಿದೆ. ಇದು ಹೋಟೆಲ್ ಖಾಸಗೀಕರಣದ ಉದ್ದೇಶ ಅಲ್ಲ, ನಿರ್ವಹಣೆಗೆ ಮಾತ್ರ ನೀಡುವ ಸಂಬಂಧ ಸಭೆ ನಡೆಯಲಿದೆ.
| ವೆಂಕಟೇಶ್ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ