ಮೈಸೂರು: ಕರೊನಾ ನಡುವೆಯೂ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದಿನಿಂದಲೇ ಸಿದ್ಧತೆ ಶುರುವಾಗಿದ್ದು, ಸರಳ ಸಂಪ್ರದಾಯಿಕ ದಸರಾ ಆಚರಣೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದೆ.
ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ದಸರಾ ಆಚರಣೆ ಕುರಿತು ಬುಧವಾರ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಶೇಖರ್, ಅ.7ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದ್ದು, ಅರಮನೆ ಆವರಣದಲ್ಲಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.15ರ ಸಂಜೆ 4.36 ರಿಂದ 4.44ರವರೆಗೆ ನಂದಿ ಪೂಜೆ ನಡೆಯಲಿದ್ದು, ಸಂಜೆ 5 ರಿಂದ 5.36ಕ್ಕೆ ಜಂಬೂ ಸವಾರಿ ಹೊರಡಲಿದೆ ಎಂದರು.
ಈ ಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ 8 ಆನೆಗಳು ದಸರಾದಲ್ಲಿ ಪಾಲ್ಗೊಳ್ಳಲಿವೆ. ಗಜಪಡೆಯಲ್ಲಿ 5 ಗಂಡಾನೆ, 3 ಹೆಣ್ಣಾನೆಗೆ ಭಾಗಿಯಾಗಲಿವೆ. ಸೆ.16 ರಂದು ಅಂಬಾವಿಲಾಸ ಅರಮನೆಗೆ ಗಜಪಡೆಯನ್ನು ಸ್ವಾಗತಿಸಲಾಗುವುದು. ಮತ್ತಿಗೋಡು ಶಿಬಿರದ ಅಭಿಮನ್ಯು ಅಂಬಾರಿಯನ್ನು ಹೊರಲಿದ್ದಾನೆ. ಗೋಪಾಲಸ್ವಾಮಿ, ಆನೆಕಾಡು ಶಿಬಿರದ ವಿಕ್ರಮ, ದುಬಾರೆ ಶಿಬಿರದ ಕಾವೇರಿ, ಧನಂಜಯ, ನಾಗರಹೊಳೆಯ ದೊಡ್ಡಹರವೆ ಶಿಬಿರದ ಅಶ್ವತ್ಥಾಮ, ಬಂಡೀಪುರ ರಾಂಪುರ ಶಿಬಿರದ ಚೈತ್ರಾ ಹಾಗೂ ಲಕ್ಷ್ಮೀ ಪಾಲ್ಗೊಳ್ಳಲಿದ್ದಾರೆ.
ಗಜಪಡೆ ನಿರ್ವಹಣೆಗೆ 50 ಲಕ್ಷ ರೂಪಾಯಿ ಮೀಸಲಿಡಲಾಗಿದೆ. 9 ದಿನವೂ ಅರಮನೆ ಒಳಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಒಟ್ಟು 157 ವೃತ್ತಗಳಲ್ಲಿ ದೀಪಾಲಂಕಾರ ಇರಲಿದ್ದು, 3 ಸ್ಥಬ್ದಚಿತ್ರಗಳಿಗೆ ಅವಕಾಶ ಇದೆ. ನಂಜನಗೂಡಿನ ದೇವಸ್ಥಾನ ಆವರಣದಲ್ಲೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.