ಬೆಂಗಳೂರು: ಇಷ್ಟು ದಿನ ಬಾಯಿ ಬಡ್ಕೊಂಡು ಸಾಕಾಗಿರುವಂತಿದೆ. ಈಗ ಮೌನ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದರು.
ಸೋನಿಯಾ ಗಾಂಧಿ ಅವರನ್ನು ಇ.ಡಿ. ವಿಚಾರಣೆ ನಡೆಸುವುದನ್ನು ವಿರೋಧಿಸಿ ಕಾಂಗ್ರೆಸ್ ಇಂದು ಮೌನ ಸತ್ಯಾಗ್ರಹ ಹಮ್ಮಿಕೊಂಡಿದೆ. ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ಸುಧಾಕರ್, ವಿಚಾರಣೆ ಎದುರಿಸಲಿ ತಪ್ಪೇನಿದೆ. ಯಾವುದೇ ತನಿಖಾ ಸಂಸ್ಥೆಗಳು ತಪ್ಪು ಕೇಸ್ ದಾಖಲಿಸಲು ಅವಕಾಶವಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ನಮ್ಮಲ್ಲಿ ನ್ಯಾಯಾಂಗ ವ್ಯವಸ್ಥೆಯಿದೆ, ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವಿರಲಿ ಎಂದು ವಾಗ್ದಾಳಿ ನಡೆಸಿದರು.
ಆಗ ಮಾಡಿದ್ದೇನು?: ದೇಶದಲ್ಲಿ ಕಾಂಗ್ರೆಸ್ 54 ವರ್ಷ ಆಡಳಿತ ನಡೆಸಿದೆ. ಆಗ ಐಟಿ, ಇಡಿ, ಸಿಬಿಐ ಇರಲಿಲ್ಲವೆ? ಸೋನಿಯಾ ಗಾಂಧಿಗೆ ಈಗ ಯಾವುದೇ ಕಚೇರಿಯಿಲ್ಲ. ಆದರೆ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಏನಾಯಿತು ಮರೆತಿದ್ದಾರೆಯೇ? ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಅಂದು ಗುಜರಾತ್ ಮುಖ್ಯಮಂತ್ರಿಯಾಗಿ ನಿರಂತರ 10 ತಾಸುಗಳ ವಿಚಾರಣೆ ಎದುರಿಸಿದರು. ಹಾಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಅಂದು ಗಡಿಪಾರು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಬಿಜೆಪಿ ಬೀದಿಗೆ ಇಳಿದಿದ್ದಿಲ್ಲ ಎಂದು ಕಾಂಗ್ರೆಸ್ಗೆ ಮಾತಿನಲ್ಲೇ ಕೆ.ಸುಧಾಕರ್ ತಿವಿದರು.
ಸಮಾವೇಶದ ಮೂಲಕ ಉತ್ತರ: ಕರೊನಾ ಕಾರಣಕ್ಕೆ ಯಾವುದೇ ದೊಡ್ಡಮಟ್ಟದ ಕಾರ್ಯಕ್ರಮ ಮಾಡಲಾಗಿರಲಿಲ್ಲ. ಇದೀಗ ಕರೊನಾ ಅಂತ್ಯವಾಗುತ್ತಾ ಬಂದಿದೆ. ಜನರಿಂದ ಜನರಿಗಾಗಿ ಬೆಳೆದ ಬಿಜೆಪಿ, ಜನರಿಗೋಸ್ಕರ ಅಧಿಕಾರವನ್ನು ಚಲಾಯಿಸುತ್ತಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜು.28ಕ್ಕೆ ಒಂದು ವರ್ಷ ಪೂರೈಸಲಿದೆ. ಸಾರ್ಥಕ ಸೇವೆಯ ಜನೋತ್ಸವವು ಅಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ. ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು, ರೈತರು, ಮಹಿಳೆಯರು, ಯುವಜನರು, ವಿದ್ಯಾರ್ಥಿಗಳು ಸೇರಿ ಎಲ್ಲ ವರ್ಗಗಳ ಜನರು ಭಾಗವಹಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಲಕ್ಷಾಂತರ ಜನರು ಭಾಗವಹಿಸಲಿದ್ದು, ಈ ಭಾಗದಲ್ಲಿ ಬಿಜೆಪಿ ದುರ್ಬಲವಾಗಿದೆ ಎನ್ನುವ ಪ್ರತಿಪಕ್ಷಗಳಿಗೆ ಬೃಹತ್ ಸಮಾವೇಶದ ಮುಖೇನ ಉತ್ತರಿಸಲಿದ್ದೇವೆ ಎಂದು ಡಾ.ಕೆ.ಸುಧಾಕರ್ ಹೇಳಿದರು.