

ಶಿವಮೊಗ್ಗ: ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಎರಡನೇ ಬಾರಿ ಪ್ರೇಮ ಪತ್ರ ಬರೆದಿದ್ದಾರೆ. ಈ ಹಿಂದೆ ಮೋಸ ಹೋಗಿದ್ದನ್ನು ಪ್ರಸ್ತಾಪ ಮಾಡಿದ್ದಾರೆ. ಮತ್ತೆ ಮೋಸ ಮಾಡುವ ಪ್ರಯತ್ನ ಬೇಡ, ನಿಮ್ಮ ಮೋಸದಾಟಕ್ಕೆ ನಾನು ಒಮ್ಮೆ ಬಲಿಯಾಗಿದ್ದೇನೆ ಎಂದು ಹಳೆಯದನ್ನು ನೆನಪು ಮಾಡುತ್ತಾ ವ್ಯಂಗ್ಯವಾಡಿದ್ದಾರೆ.
ಅಂದಹಾಗೆ ಅವರು ಪ್ರೇಮ ಪತ್ರ ಬರೆದಿರುವುದು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅವರಿಗೆ! ಕಟುವಾದ ಶಬ್ದಗಳನ್ನು ಬಳಕೆ ಮಾಡಿರುವ ಕಿಮ್ಮನೆ, ಪಕ್ಷ ಬಿಡುವ ವಿಚಾರ ಇದ್ದರೆ ಈಗಲೇ ತೀರ್ಮಾನ ತೆಗೆದುಕೊಳ್ಳಿ. ಕಳೆದ ಚುನಾವಣೆ ವೇಳೆ ಮಾಡಿದಂತೆ ಈ ಚುನಾವಣೆಯಲ್ಲೂ ಮೋಸ ಮಾಡಬೇಡಿ ಎಂದು ತಾಕೀತು ಮಾಡಿದ್ದಾರೆ.
ಬಗರ್ಹುಕುಂ ಮತ್ತು ಅರಣ್ಯ ಹಕ್ಕು ಕಾಯ್ದೆ ವಿಚಾರದಲ್ಲಿ ಮಂಜುನಾಥ ಗೌಡ ಕೆಲ ತಿಂಗಳ ಹಿಂದೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಆದರೆ ಪಕ್ಷದ ಬ್ಯಾನರ್ ಹಾಗೂ ಪಕ್ಷದ ಯಾವುದೇ ಮುಖಂಡರ ಭಾವಚಿತ್ರಗಳನ್ನು ಬಳಸಿರಲಿಲ್ಲ. ಕಾಂಗ್ರೆಸ್ ಪಕ್ಷ ಸೇರಿದ್ದ ಆರಂಭದ ದಿನಗಳಲ್ಲಿ ಗೌಡರು ಈ ಪಾದಯಾತ್ರೆ ಆಯೋಜಿಸಿದ್ದರು. ಆಗ ಬಹಿರಂಗ ಪತ್ರ ಬರೆದಿದ್ದ ಕಿಮ್ಮನೆ ರತ್ನಾಕರ್, 'ಪಕ್ಷದ ವೇದಿಕೆ ಅಡಿಯಲ್ಲಿ ಕಾರ್ಯಕ್ರಮ ಮಾಡಿ, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ದುರ್ಬಲಗೊಳಿಸುವ ಪ್ರಯತ್ನ ಮಾಡಬೇಡಿ' ಎಂದು ಹೇಳಿದ್ದರು. ಪಕ್ಷದ ಮುಖಂಡರಿಗೂ ಈ ಕಾರ್ಯಕ್ರಮದಲ್ಲಿ ಬಾಗವಹಿಸಬೇಡಿ ಎಂದು ಮನವಿ ಮಾಡಿದ್ದರು. ಆದರೂ ಜಿಲ್ಲಾಧ್ಯಕ್ಷ ಸುಂದರೇಶ್, ಕಾಗೋಡು ತಿಮ್ಮಪ್ಪ, ಮಧು ಬಂಗಾರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈಗ ಎರಡನೇ ಬಾರಿಗೆ ಮಂಜುನಾಥ ಗೌಡರು ಕಡಿದಾಳಿನಿಂದ ಜು. 28ರಂದು ಪಾದಯಾತ್ರೆ ಹಮ್ಮಿಕೊಂಡಿದ್ದು, ರತ್ನಾಕರ್ ಅವರನ್ನು ಕೆರಳಿಸಿದೆ. ಪಕ್ಷದ ನಿರ್ದೇಶನದಂತೆ ಪಾದಯಾತ್ರೆ ಮಾಡುವ ಬದಲಿಗೆ ಈ ರೀತಿ ಪಕ್ಷದಲ್ಲಿ ಒಡಕು ಉಂಟು ಮಾಡುವ ಯಾತ್ರೆ ಬೇಕೇ ಎಂಬುದು ಕಿಮ್ಮನೆ ಅವರ ಪ್ರಶ್ನೆ.
ಮಂಜುನಾಥ ಗೌಡರ ಪಾದಯಾತ್ರೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕಿಮ್ಮನೆ ರತ್ನಾಕರ್, ಮಂಜುನಾಥ ಗೌಡರಿಗೆ ಬರೆದಿರುವ ಪತ್ರದಲ್ಲಿ 'ನಿಮ್ಮ ಯೋಜಿತ ಪಾದಯಾತ್ರೆ ಪಕ್ಷ ವಿರೋಧಿ ಕಾರ್ಯಕ್ರಮವಾಗಿದೆ ಮತ್ತು ನಿಮ್ಮನ್ನು ನೀವು ವ್ಯಕ್ತಿ ಪೂಜೆ ಮಾಡಿಕೊಳ್ಳುತ್ತಿದ್ದೀರಿ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷ ಬಿಡುವ ಯೋಜನೆ ಇದ್ದರೆ ತಕ್ಷಣ ಸೂಕ್ತ ತೀಮಾನ ಕೈಗೊಳ್ಳಿ ಎಂದು ಸೂಚಿಸಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು' ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ. ಹಲವರು ಈ ಪ್ರತವನ್ನ ಪ್ರೇಮಪತ್ರ ಎಂದೂ ವ್ಯಂಗ್ಯವಾಡಿದ್ದಾರೆ.
ಕಿಮ್ಮನೆ ಪತ್ರದಲ್ಲಿ ಏನಿದೆ?: ಪಾದಯಾತ್ರೆಗೆ ಸಂಬಂಧಿಸಿ ಹೊರಡಿಸಿರುವ ಕರಪತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಯಾವ ಮುಖಂಡರ ಹೆಸರು ಮತ್ತು ಭಾವಚಿತ್ರ, ಪಕ್ಷದ ಚಿಹ್ನೆಯೂ ಇಲ್ಲ. ಪಕ್ಷ ಬಿಡುವ ಯೋಚನೆ ಇದ್ದರೆ ಮಾತ್ರ ಇಂತಹ ಖಾಸಗಿ ಪಾದಯಾತ್ರೆಯ ತಾಲೀಮು ನಡೆಯುತ್ತದೆ. ನಿಮಗೆ ಅಂತಹ ಯೋಚನೆ ಇದ್ದರೆ ತಕ್ಷಣ ಸೂಕ್ತ ತೀರ್ಮಾನಗೊಳ್ಳಿ. ಇದರಿಂದ ನಿಮಗೂ ಮತ್ತು ಪಕ್ಷಕ್ಕೂ ಒಳ್ಳೆಯದು ಎಂದು ಕಿಮ್ಮನೆ ರತ್ನಾಕರ್ ಪತ್ರದಲ್ಲಿ ಬರೆದ್ದಾರೆ. ಈ ಪಾದಯಾತ್ರೆ ಬಗ್ಗೆ ಕೆಪಿಸಿಸಿ ಮತ್ತು ಜಿಲ್ಲಾಧ್ಯಕ್ಷರಿಂದ ಆದೇಶವೂ ಬಂದಿಲ್ಲ. ಕೆಪಿಸಿಸಿ ಅಧ್ಯಕ್ಷರು ಆಗಸ್ಟ್ ಒಂದರಿಂದ 10ನೇ ತಾರೀಖಿನ ಒಳಗೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 15 ಕಿಮೀ ಪಾದಯಾತ್ರೆಯನ್ನು ಹಮ್ಮಿಕೊಳ್ಳುವಂತೆ ಆದೇಶ ಮಾಡಿದ್ದಾರೆ. ಅದರಂತೆ ಆ.8ರಂದು ಮೇಗರವಳ್ಳಿಯಿಂದ ತೀರ್ಥಹಳ್ಳಿಯವರೆಗೆ ಪಕ್ಷದಿಂದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದಿರುವ ಕಿಮ್ಮನೆ ಹಳೆಯದನ್ನೂ ನೆನಪಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ: 2015ರಲ್ಲಿ ಕಾಂಗ್ರೆಸ್ ಸೇರಿ, 2018ರಲ್ಲಿ ಜೆಡಿಎಸ್ ಸೇರಿದ್ದೀರಿ. ಒಂದು ವರ್ಷದ ಹಿಂದೆ ಪಕ್ಷಕ್ಕೆ ಸೇರಿರುವ ನಿಮಗೆ ಮೊದಲ ಸ್ಥಾನ ಬೇಕು ಎನ್ನುವುದು ನಿಮ್ಮ ನಿಲುವು. ಹಣ ಬಲವೂ ಇದಕ್ಕೆ ಕಾರಣವಿರಬಹುದು. ಆದರೆ ಕಳೆದ 20 ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರಿಗೂ ಪ್ರಥಮ ಪ್ರಾಶಸ್ತ್ಯಬೇಕು ಎಂಬುದು ತಿಳಿದಿರಲಿ. ಈ ಕಾರ್ಯಕ್ರಮದಿಂದ ಪಕ್ಷದಲ್ಲಿ ಗುಂಪುಗಾರಿಕೆ ಸೃಷ್ಟಿಗೆ ಕಾರಣವಾಗುತ್ತದೆ. ಆರಗ ಜ್ಞಾನೇಂದ್ರ ಅವರು ನಂದಿತಾ ಆತ್ಮಹತ್ಯೆ ಪ್ರಕರಣವನ್ನು ಅತ್ಯಾಚಾರ, ಕೊಲೆ ಎಂದು ಸುಳ್ಳು ಬಿಂಬಿಸಿ ಕ್ಷೇತ್ರದಲ್ಲಿ ಕೋಮುಗಲಭೆ ಸೃಷ್ಟಿ ಮಾಡಿದರು, ಲಾಭ ಪಡೆದರು. ನೀವು ನನಗೆ ಬೆಂಬಲ ನೀಡುತ್ತೇನೆ ಎಂದು ಪಕ್ಷಕ್ಕೆ ಬಂದು ನಿಮ್ಮ ಹಣದ ಥೈಲಿ ನಂಬಿ ನನಗೆ ಮೋಸ ಮಾಡಿ ಕೊನೆಯಲ್ಲಿ ಜೆಡಿಎಸ್ ಸೇರಿ ಮೋಸ ಮಾಡಿದಿರಿ. ಇಬ್ಬರ ಮೋಸದಾಟಕ್ಕೆ ನಾನು ಕಳೆದ ಬಾರಿ ಬಲಿಯಾದೆ. ಕಾಂಗ್ರೆಸ್ ಪಕ್ಷಕ್ಕೂ, 28ರ ನಿಮ್ಮ ಪಾದಯಾತ್ರೆ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ನಿಮ್ಮ ಪಕ್ಷ ವಿರೋಧಿ ಚಟುವಟಿಕೆಯನ್ನು ಮುಖಂಡರ ಗಮನಕ್ಕೆ ತರುತ್ತೇನೆ ಎಂದು ಬರೆದಿದ್ದಾರೆ.