ಜಿಲ್ಲೆ

ಡಿಕೆಶಿ ಉತ್ಸವ ಆಚರಿಸಿಕೊಂಡರೂ ಅಚ್ಚರಿಯಿಲ್ಲ...

ಬೆಂಗಳೂರು: ಈಗ ಸಿದ್ದರಾಮೋತ್ಸವಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಮುಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಒಂದು ಉತ್ಸವ ಆಚರಿಸಿಕೊಂಡರೂ ಅಚ್ಚರಿಯಿಲ್ಲ ಎಂದು ಸಚಿವ ಮುನಿರತ್ನ ಹೇಳಿದರು.

ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುನಿರತ್ನ, ಸಿದ್ದರಾಮೋತ್ಸವದ ಹಿಂದೆ ಚುನಾವಣಾ ರಾಜಕಾರಣವಿದೆ. ಖಂಡಿತವಾಗಿ ಬೇರೇನೂ ಅಲ್ಲ. ಸಿದ್ದರಾಮಯ್ಯ ಅವರಿಗೆ ಹುಟ್ಟಿದ ದಿನವೇ ಗೊತ್ತಿಲ್ಲ. ಸಿದ್ದರಾಮಣ್ಣ ಹುಟ್ಟಿದ ದಿನದ ಶುಭಾಶಯ ಅಂತ ಹೇಳಿದರೆ, ಏಯ್ ಹೋಗೋ ನನಗೆ ಹುಟ್ಟಿದ ದಿನವೇ ಗೊತ್ತಿಲ್ಲ ಅಂತಿದ್ದರು. ಆದರೀಗ ಇದ್ದಕ್ಕಿದ್ದಂತೆ ಆಗಸ್ಟ್ 3 ಅಂತಲೇ ಹೇಗೆ ತಿಳಿಯಿತೋ ಗೊತ್ತಿಲ್ಲ. ಈ ಹುಟ್ಟುಹಬ್ಬ ಅವರು ಮಾಡಿಕೊಳ್ಳುತ್ತಿರೋದಲ್ಲ. ಅವರ ಅಕ್ಕಪಕ್ಕದಲ್ಲಿ ಇರುವವರು ಮಾಡುತ್ತಿರುವುದು. ಅವರೆಲ್ಲಾ ಯಾರು ಅಂತ ನಿಮಗೆ(ಮಾಧ್ಯಮದವರು) ಗೊತ್ತು. ನೀವೇ ತಿಳಿದುಕೊಳ್ಳಿ ಎಂದರು.

ಸಿದ್ದರಾಮಯ್ಯ ಅವರಂತೆ ನಾನು ಬೇರೊಂದು ಪಕ್ಷ ತೊರೆದು ಬಿಜೆಪಿಗೆ ಬಂದಿರುವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಜೀವನದಲ್ಲಿ ಇದೆಲ್ಲ ಸಹಜ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿಯೇ ಇರುವೆ. ಪಕ್ಷ ಎಲ್ಲವನ್ನೂ ಕೊಟ್ಟು ಜನರ ಸೇವೆಗೆ ಅವಕಾಶ ಕಲ್ಪಿಸಿದ್ದು, ಬೇರೆ ಯೋಚನೆ ಬರುವುದಿಲ್ಲ. ಅಂತಹ ಪ್ರಶ್ನೆಗಳಿಗೆ ಉತ್ತರಿಸಲು ಬಯಸುವುದಿಲ್ಲ ಎಂದು ಮುನಿರತ್ನ ಹೇಳಿದರು.