ಶಿವಮೊಗ್ಗ/ಬೆಂಗಳೂರು: ಇಷ್ಟು ದಿನ ಸುಮ್ಮನಿದ್ದ ಮುಸಲ್ಮಾನ ಗೂಂಡಾಗಳು ಶಿವಮೊಗ್ಗದಲ್ಲಿ ಬಾಲ ಬಿಚ್ಚಲು ಶುರು ಮಾಡಿದ್ದಾರೆ. ಹಿಂದೂ ಸಂಘಟನೆಯ ಹರ್ಷನನ್ನು ಹತ್ಯೆ ಮಾಡಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಹಿಜಾಬ್ ವಿವಾದ ಕುರಿತು ಮೊನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೊಟ್ಟ ಪ್ರಚೋಧನಾಕಾರಿ ಹೇಳಿಕೆ ಮುಸಲ್ಮಾನ್ ಗೂಂಡಾಗಳಿಗೆ ಕುಮ್ಮಕ್ಕು ನೀಡಿದೆ. ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಕೊಲೆಯಾಗಿದೆ. ಯಾವುದೇ ಕಾರಣಕ್ಕೂ ನಾವು ಆರೋಪಿಗಳನ್ನ ಬಿಡೋದಿಲ್ಲ. ಪೊಲೀಸರು ಬಂಧಿಸುತ್ತಾರೆ. ಕೊಲೆಯಾದ ಹರ್ಷ ಉತ್ತಮ ಸಂಸ್ಕಾರ, ನಡವಳಿಕೆಯುಳ್ಳ ಯುವಕ. ಇನ್ನೂ ಮದುವೆ ಆಗಿರಲಿಲ್ಲ. ಹರ್ಷನ ಹತ್ಯೆಯನ್ನ ಸಹಿಸಲು ಸಾಧ್ಯವಿಲ್ಲ. ಆರೋಪಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ ಬಂಧಿಸಲು ಪೊಲೀಸರಿಗೆ ಸೂಚಿಸಿರುವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಅತ್ತ ಈಶ್ವರಪ್ಪರ ಆರೋಪಕ್ಕೆ ತಿರುಗೇಟು ಕೊಟ್ಟ ಡಿಕೆಶಿ, ಸಿದ್ದರಾಮಯ್ಯನವರು ಹೇಳಿರುವಂತೆ ಈಶ್ವರಪ್ಪನ ಮಿದುಳಿಗೂ ನಾಲಿಗೆಗೂ ಸಂಪರ್ಕವೇ ಇಲ್ಲ ಎಂದು ಟೀಕಿಸಿದ್ದಾರೆ.
ಈ ಕೊಲೆಗೂ- ಹಿಜಾಬ್ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ರಾಜಕೀಯ ಬಣ್ಣ ಹಚ್ಚುವ ಅಗತ್ಯವಿಲ್ಲ. ಈ ಹತ್ಯೆ ಯಾಕಾಗಿದೆ ಎಂದು ಪೊಲೀಸ್ ಅಧಿಕಾರಿಗಳೇ ಹೇಳಬೇಕು. ಆದರೆ ಸಾಮಾನ್ಯ ಪರಿಜ್ಞಾನವೂ ಇಲ್ಲದೆ ಆತ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದ ಡಿಕೆಶಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಶಿವಮೊಗ್ಗ ಜನತೆ ಶಾಂತಿ ಕಾಪಾಡಬೇಕು ಎಂದಿದ್ದಾರೆ.