ದಾವಣಗೆರೆ: ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ರೋಗವಲ್ಲ. ಇದು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ರೋಗ ನಿರೋಧಕಶಕ್ತಿ ಕಡಿಮೆ ಹಾಗೂ ದೀರ್ಘಕಾಲ ಐಸಿಯು ವಾರ್ಡ್ನಲ್ಲಿ ಚಿಕಿತ್ಸೆ ಪಡೆದವರಲ್ಲಿ ಕಂಡು ಬರುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ದಾವಣಗೆರೆ ಜಿಲ್ಲಾಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ್ದ ಸಚಿವರು ಸುದ್ದಿಗಾರೊಂದಿಗೆ ಮಾತನಾಡಿದರು. ಮ್ಯುಕೋಮೈಕೋಸಿಸ್‌ಗೆ (ಕರಿಮಾರಿ) ಅಗತ್ಯ ಔಷಧದ ಕೊರತೆ ಇದೆ. ದಾವಣಗೆರೆ ಜಿಲ್ಲೆಯಲ್ಲಿ ಕರಿಮಾರಿ ಸೋಂಕಿನಿಂದ 15ರಿಂ 20 ರೋಗಿಗಳು ಬಳಲುತ್ತಿದ್ದಾರೆ. ಇದಕ್ಕೆ ಬೇಕಾದ ಔಷಧ ಪೂರೈಕೆ ಮಾಡುತ್ತೇವೆ. ಆತಂಕ ಪಡುವ ಅಗತ್ಯವಿಲ್ಲ. ಸೋಂಕಿತರು ಬಿಡುಗಡೆಯಾಗುವ ಮುನ್ನ ಸಂಪೂರ್ಣ ತಪಾಸಣೆಗೆ ಸೂಚಿಸಿದ್ದೇನೆ. ಬ್ಯ್ಲಾಕ್ ಫಂಗಸ್ನ ವೈಭವೀಕರಣ ಬೇಡ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.
ಕರೊನಾ ಸೋಂಕಿನ ಪ್ರಮಾಣ ಕಡಿಮೆ ಮಾಡುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ. ಕರೊನಾ 2ನೇ ಅಲೆಯನ್ನು ಸಮರ್ಥವಾಗಿ ನಿಯಂತ್ರಿಸುತ್ತೇವೆ. 3ನೇ ಅಲೆಯನ್ನು ಬಾರದಂತೆ ನೋಡಿಕೊಳ್ಳುತ್ತೇವೆ. ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲರಿಗೂ ಲಸಿಕೆ ನೀಡುತ್ತೇವೆ ಎಂದು ಸಚಿವ ಸುಧಾಕರ್ ಭರವಸೆ ನೀಡಿದರು, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಉಪಸ್ಥಿತರಿದ್ದರು.