ಜಿಲ್ಲೆ

ಹತ್ಯೆ ಮಾಡಿದವರ ಎನ್​ಕೌಂಟರ್​ಗೂ ಸರ್ಕಾರ ಸಿದ್ಧ: ಸಚಿವ ಅಶ್ವತ್ಥನಾರಾಯಣ

ರಾಮನಗರ: ಅಮಾಯಕರ ಹತ್ಯೆಯನ್ನು ಸಹಿಸಿ ಸುಮ್ಮನೆ ಕೂರಲು ಸಾಧ್ಯವಿಲ್ಲ, ಹತ್ಯೆ ಮಾಡಿದ ಆರೋಪಿಗಳ ವಿರುದ್ಧ ಎನ್​ಕೌಂಟರ್ ಸೇರಿದಂತೆ ಯಾವುದೇ ಕಠಿಣ ಕ್ರಮಕ್ಕೂ ಸರ್ಕಾರ ಸಿದ್ಧವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ನಗರದಲ್ಲಿ ಶುಕ್ರವಾರ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅಶ್ವತ್ಥನಾರಾಯಣ, ಬಿಜೆಪಿ ಕಾರ್ಯಕರ್ತರ ಆಕ್ರೋಶ ಈ ಸಂದರ್ಭದಲ್ಲಿ ಸಹಜ. ಈಗಾಗಲೇ ಸಂಬಂಧಿಸಿದವರನ್ನು ಬಂಧಿಸಲಾಗಿದೆ. ಸರ್ಕಾರ ಹಾಗೂ ಗೃಹ ಸಚಿವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರ ಭಾವನೆಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತೇವೆ. ಯು.ಪಿ. ಮಾದರಿ ಅಲ್ಲ, ಅದಕ್ಕಿಂತ ಐದು ಹೆಜ್ಜೆ ಮುಂದೆ ಹೋಗಿ ಕ್ರಮ ಕೈಗೊಳ್ಳುತ್ತೇವೆ. ಅದರಲ್ಲೂ ಯಾವುದೇ ಮುಲಾಜಿಲ್ಲ. ಹಂತಕರನ್ನು ಎನ್​ಕೌಂಟರ್​ ಮಾಡಲೂ ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ರಾಜ್ಯದ ಜನತೆಯ ರಕ್ಷಣೆ ಮಾಡುವ ಜವಾಬ್ದಾರಿ ಹೊತ್ತಿದೆ. ಮಂಗಳೂರಿನಲ್ಲಿ ನಡೆದ ಘಟನೆಗೆ ಈಗಾಗಲೇ ತನಿಖೆ ಆರಂಭಗೊಂಡಿದೆ, ಯಾವ ಕಾರಣಕ್ಕೂ ಕೊಲೆ ಗಡುಕರು, ದುಷ್ಕರ್ಮಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ತನಿಖೆಗೆ ತಂಡಗಳನ್ನು ರಚಿಸಲಾಗಿದೆ. ಅಮಾಯಕರ ಜೀವ ರಕ್ಷಣೆ ನಮ್ಮ‌ ಕರ್ತವ್ಯ ಎಂದರು.

ಪಿಎಫ್‌ಐ, ಎಸ್​ಡಿಪಿಐ ನಿಷೇಧಿಸುವಂತೆ ಕಾಂಗ್ರೆಸ್‌ ಒತ್ತಾಯದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಮಾತನಾಡಲು ಕಾಂಗ್ರೆಸ್​ಗೆ ನೈತಿಕತೆ ಇಲ್ಲ. ಅವರ ತುಷ್ಟೀಕರಣ ರಾಜಕಾರಣವೇ ಇದಕ್ಕೆಲ್ಲ‌ ಕಾರಣ. ಅವರಿಗೂ ದೇಶದ್ರೋಹಿಗಳಿಗೂ ವ್ಯತ್ಯಾಸ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.