ಜಿಲ್ಲೆ

ರಾಮನಗರದಲ್ಲಿ ಗಂಡಸ್ತನದ ಹೇಳಿಕೆ: ಮೇಕೆದಾಟು ಪಾದಯಾತ್ರೆಯಲ್ಲಿ ಟ್ವಿಸ್ಟ್​ ಕೊಟ್ಟ ಡಿ.ಕೆ.ಸುರೇಶ್​

arunakunigal

ಬೆಂಗಳೂರು: ಅಡೆತಡೆಗಳನ್ನು ದಾಟಿ ಬಂದ ಮೇಕೆದಾಟು ಪಾದಯಾತ್ರೆ ಗುರುವಾರ ಬಸವನಗುಡಿಯ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಸಂಪನ್ನಗೊಳ್ಳುತ್ತಿದ್ದು, ಈ ವೇಳೆ ಅಬ್ಬರಿಸಿ ಬೊಬ್ಬಿರಿಯುವ ಧಾವಂತದಲ್ಲಿ ಕಾಂಗ್ರೆಸ್​ ಇದೆ. ಕೊನೇ ದಿನದ ಪಾದಯಾತ್ರೆಯು ಇಂದು ಬೆಳಗ್ಗೆ ಅರಮನೆ ಮೈದಾನದಿಂದ ಹೊರಟಿದೆ.

ರಾಮನಗರದ ಕಾರ್ಯಕ್ರಮದಲ್ಲಿ ಗಂಡಸ್ತನದ ಸವಾಲು ಹಾಕಿದ್ದ ಸಚಿವ ಡಾ. ಸಿ.ಎನ್​. ಅಶ್ವತ್ಥನಾರಾಯಣ್​ಗೆ ಎದಿರೇಟು ನೀಡಲು ಸಂಸದ ಡಿ.ಕೆ. ಸುರೇಶ್​ ಪಾದಯಾತ್ರೆ ಮಾರ್ಗವನ್ನೇ ಬದಲಿಸಿದ್ದಾರೆ. ಗುರುವಾರ ಪಾದಯಾತ್ರೆಯನ್ನು ಮಲ್ಲೇಶ್ವರದಲ್ಲಿ ಹಾದುಹೋಗುವಂತೆ ನೋಡಿಕೊಂಡಿದ್ದಾರೆ. ಮಲ್ಲೇಶ್ವರದಲ್ಲಿ ಜನಬಲ ಪ್ರದರ್ಶನಕ್ಕೂ ಕಾಂಗ್ರೆಸ್​ ತಯಾರಿ ನಡೆಸಿದೆ. ರಾಜ್ಯದ ಮೂಲೆಮೂಲೆಯಿಂದ ಕಾರ್ಯಕರ್ತರು ಪಾದಯಾತ್ರೆಗೆ ಆಗಮಿಸುತ್ತಿದ್ದು, ಬಸವನಗುಡಿಯ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಇಂದು ಬೃಹತ್​ ಸಮಾವೇಶದೊಂದಿಗೆ ಅಂತ್ಯವಾಗಲಿದೆ.

ಇಂದು ಎಲ್ಲೆಲ್ಲಿ?: ಕಾವೇರಿ ಚಿತ್ರಮಂದಿರದಿಂದ ಸ್ಯಾಂಕಿ ಕೆರೆ, 18ನೇ ಕ್ರಾಸ್​ ಮಲ್ಲೇಶ್ವರ, ಮಾರ್ಗೊಸಾ ರಸ್ತೆ, ಕೆ.ಸಿ. ಜನರಲ್​ ಆಸ್ಪತ್ರೆ, ಲಿಂಕ್​ ರಸ್ತೆ, ಶೇಷಾದ್ರಿಪುರ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಕಾಟನ್​ ಪೇಟೆ ಮುಖ್ಯರಸ್ತೆ, ಬ್ರಿಯಾಂಡ್​ ವೃತ್ತ, ರಾಯನ್​ ವೃತ್ತ, ಈದ್ಗಾ ಮೈದಾನ ತಲುಪಿ, ಸಂಜೆ ಬಸವನಗುಡಿಯ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಮೇಕೆದಾಟು ಪಾದಯಾತ್ರೆ ಸಮಾಪನಗೊಳ್ಳಲಿದೆ.

ನ್ಯಾಷನಲ್​ ಕಾಲೇಜಿನಲ್ಲಿ ಈ ಹೋರಾಟ ಮುಗಿದರೂ ಇದು ರಾಜ್ಯದಲ್ಲಿನ ಹೋರಾಟದಲ್ಲಿನ ಮೊದಲ ಭಾಗ ಅಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.