ಜಿಲ್ಲೆ

ಕೈವಾರದಲ್ಲಿ ನಡೆದ ಮದ್ವೆ ಫೋಟೋ ವೈರಲ್​: ಅಪರೂಪದ ಜೋಡಿಗೆ ಶುಭಾಶಯಗಳ ಮಹಾಪೂರವೇ ಬರ್ತಿದೆ...

ಚಿಂತಾಮಣಿ: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬ ಮಾತಿಗೆ ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಲ್ಯಾಣ ನಗರಿ ಶೀಕ್ಷೇತ್ರ ಕೈವಾರ ಸಾಕ್ಷಿಯಾಗಿತ್ತು.

ವಾಮನ ಮೂರ್ತಿಗಳಂತೆ ಕಾಣುವ 3 ಅಡಿಗೂ ಕಡಿಮೆ ಎತ್ತರ ಇರುವ ಗಂಡು ಹಾಗೂ 2.5 ಅಡಿ ಎತ್ತರ ಇರುವ ಹೆಣ್ಣು ಹಸೆಮಣಿ ಏರಿದರು. ವರನಿಗೆ 28 ವರ್ಷ, ವಧುವಿಗೆ 25 ವರ್ಷ. ವರ ವಿಷ್ಣು ಬೆಂಗಳೂರಿನವರು, ವಧು ಜ್ಯೋತಿ ಕೋಲಾರ ಮೂಲದವರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಇಬ್ಬರೂ ಪದವೀಧರರಾಗಿದ್ದು, ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಸ್ಥರಾಗಿದ್ದಾರೆ. ವಿಶೇಷವಾಗಿ ಕಂಡ ಅಪರೂಪದ ಈ ಜೋಡಿ, ಕ್ಷೇತ್ರಕ್ಕೆ ಬಂದ ಭಕ್ತರನ್ನು ಆಕರ್ಷಿಸಿತು. ಇವರಿಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತುಂಬು ಹೃದಯದಿಂದ ನವ ದಂಪತಿಗೆ ಆಶೀರ್ವದಿಸುತ್ತಿದ್ದಾರೆ.

ಕುಬ್ಜ ಜೋಡಿಗೆ ಮದುವೆ ಆಗುವುದು ತುಂಬಾ ವಿರಾಳ. ಸಾಕಷ್ಟು ದಿನಗಳಿಂದ ಹುಡುಗ ಹಾಗೂ ಹುಡುಗಿಯ ಪೋಷಕರ ಕಡೆಯಿಂದ ಮದುವೆ ಮಾಡಲು ಇಬ್ಬರ ಕಡೆಯಿಂದಲೂ ಹುಡುಕಾಟದಲ್ಲಿ ನಿರತರಾಗಿದ್ದರು. ಆದರೆ ಕುಬ್ಜ ಎಂಬ ಕಾರಣಕ್ಕಾಗಿ ಸಾಕಷ್ಟು ನಿರಾಕರಣೆಗೊಂಡಿದ್ದವು. ಇತ್ತೀಚಿಗೆ ಎರಡೂ ಕುಟುಂಬಕ್ಕೂ ಒಬ್ಬರಿಗೊಬ್ಬರ ಮಾಹಿತಿ ಲಭ್ಯವಾಗಿ, ಕುಬ್ಜ ಜೋಡಿಯ ಮದುವೆ ಮಾಡಿದ್ದಾರೆ. ಸದ್ಗುರು ತಾತಯ್ಯನವರ ಸನ್ನಿಧಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ ತಾತಯ್ಯನ ಆಶೀರ್ವಾದ ಪಡೆಯಿತು. ಮುದ್ದಾದ ಜೋಡಿಗೆ ಸಾರ್ವಜನಿಕರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.