ಜಿಲ್ಲೆ

ಆಸ್ಪತ್ರೆ ಬಾಗಿಲಲ್ಲಿ ನಿಂತಿರುವಾಗಲೇ ಹೆರಿಗೆ, ಕೆಳಗೆ ಬಿದ್ದು ಮಗು ಸತ್ತಿದ್ದಕ್ಕೆ ಪೋಷಕರೇ ಕಾರಣವಂತೆ!

arunakunigal

ಮಂಡ್ಯ: ಆಸ್ಪತ್ರೆ ಮುಂಭಾಗ ಗರ್ಭಿಣಿಗೆ ನಿಂತಲ್ಲೇ ಹೆರಿಗೆಯಾಗಿ ಮಗು ಕೆಳಗೆ ಬಿದ್ದು ಮೃತಪಟ್ಟ ಘಟನೆಗೆ ಪೋಷಕರೇ ಕಾರಣವಂತೆ! ಹೀಗಂತ ಆಸ್ಪತ್ರೆ ಸಿಬ್ಬಂದಿಯನ್ನ ಮಿಮ್ಸ್ ನಿರ್ದೇಶಕ ಡಾ.ಹರೀಶ್ ಸಮರ್ಥಿಸಿಕೊಂಡಿದ್ದಾರೆ.

ಹೆರಿಗೆ ನೋವು ಬಂದಿದೆ, ಅಡ್ಮಿಟ್​ ಮಾಡಿಕೊಳ್ಳಿ ಎಂದು ಆಸ್ಪತ್ರೆ ಬಾಗಿಲಲ್ಲಿ ನಿಂತಿದ್ದ ಮಹಿಳೆಗೆ ಅಲ್ಲಿಯೇ ಹೆರಿಗೆಯಾಗಿದ್ದು, ಮಗು ಕೆಳಗೆ ಬಿದ್ದು ಸತ್ತ ಘಟನೆ ಇಂದು (ಬುಧವಾರ) ಬೆಳಗ್ಗೆ ಮಂಡ್ಯ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಮುಂಭಾಗ ಸಂಭವಿಸಿತ್ತು.

ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಮಿಮ್ಸ್ ನಿರ್ದೇಶಕ ಡಾ.ಹರೀಶ್ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ಎಚ್.ಸಿ.ಸವಿತಾ, ನಿನ್ನೆಯೇ ಅಡ್ಮಿಷನ್ ಆಗಿದ್ರೆ ಇದೆಲ್ಲ ಆಗುತ್ತಲೇ ಇರಲಿಲ್ಲ. ನಿನ್ನೆ ಆಸ್ಪತ್ರೆಗೆ ಬಂದಾಗ ಪರೀಕ್ಷೆ ವೇಳೆ ಮಗುವಿನ ಎದೆ ಬಡಿತ ಕೇಳಿಸಿರಲಿಲ್ಲ. ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯೊಳಗೆ ಮಗು ಸಾವನ್ನಪ್ಪಿತ್ತು. ನಿನ್ನೆಯೇ ಅಡ್ಮಿಷನ್ ಮಾಡುವಂತೆ ಹೇಳಿದ್ರೂ ಮಾಡಿರಲಿಲ್ಲ. ಇವತ್ತು ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರೆದುಕೊಂಡು ಬಂದಿದ್ರು. ಕರೊನಾ ಆರ್​ಟಿಪಿಸಿಆರ್​ ರಿಪೋರ್ಟ್ ಬಂದಿರಲಿಲ್ಲ. ಹಾಗಾಗಿ ಆ್ಯಂಟಿಜನ್ ಟೆಸ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತಿತ್ತು. ಮನೆಯವರಿಗೆ ಆಭರಣ ಕೊಡುವುದಾಗಿ ಗರ್ಭಿಣಿ ಹೊರಗೆ ಹೋದಾಗ ಹೆರಿಗೆ ಆಗಿದೆ. ಬೆಳಗ್ಗೆ 8 ಗಂಟೆಗೇ ಗರ್ಭಿಣಿಯನ್ನು ಕರೆದುಕೊಂಡು ಬಂದಿಲ್ಲ ಎಂದಿದ್ದಾರೆ.