ಜಿಲ್ಲೆ

ಪ್ರತಿಭಾನ್ವಿತ ವ್ಯಕ್ತಿತ್ವದಿಂದ ಹೆಗ್ಗುರುತು ಸಾಧ್ಯ

Avinash R

ಬೆಳ್ತಂಗಡಿ: ಬಾಹ್ಯರೂಪದ ಕಾರಣದಿಂದ ಸಾಮಾಜಿಕವಾಗಿ ಗುರುತಿಸಿಕೊಳ್ಳಬಾರದು. ಪ್ರತಿಭೆ ಮತ್ತು ವ್ಯಕ್ತಿತ್ವದಿಂದ ಇತರರು ಗುರುತಿಸುವಂತೆ ಬೆಳೆಯಬೇಕು ಎಂದು ಉಜಿರೆ ಶ್ರೀ ಧ.ಮಂ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ ಜೈನ್ ಹೇಳಿದರು.

ಉಜಿರೆ ಎಸ್ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಜನ್ಮಾದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಜೀವನದಲ್ಲಿ ಶಿಸ್ತು ಮತ್ತು ಸಮಯಪಾಲನೆ ಕಾಪಾಡಿಕೊಂಡು ಉನ್ನತ ಸ್ಥಾನಕ್ಕೆ ಏರಿದ್ದರು. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಪಾಲಿಸಬೇಕು ಎಂದರು.

ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಿರ್ಜಾ ಇಸ್ಮಾಯಿಲ್ ಅವರ ಜೀವನ ದರ್ಶನ ಮಾಡುವುದರಿಂದ ವಿದ್ಯಾರ್ಥಿಗಳು ಆದರ್ಶಪ್ರಾಯವಾದ ಬದುಕನ್ನು ಕಟ್ಟಿಕೊಳ್ಳಬಹುದು. ಸನ್ನಡತೆಯುಳ್ಳವರಾಗಿ ಮೌಲ್ಯಯುತ ಜೀವನ ನಡೆಸಿ ಹೆತ್ತವರಿಗೆ ಮತ್ತು ಕಲಿಯುತ್ತಿರುವ ವಿದ್ಯಾಸಂಸ್ಥೆಗಳಿಗೆ ಹೆಮ್ಮೆ ತರುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು.

ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ಕಚೇರಿ ತೆರೆಯಲು ಮಿರ್ಜಾ ಇಸ್ಮಾಯಿಲ್ ಅವರು ಪ್ರಮುಖ ಕಾರಣೀಕರ್ತರಾಗಿದ್ದಾರೆ. ಅವರು ಕನ್ನಡಕ್ಕೆ ಕೊಟ್ಟಿರುವ ಕೊಡುಗೆಗಳನ್ನು ನೆನಪಿಸಿಕೊಳ್ಳಬೇಕು ಎಂದರು.

ಸಮಾಜ ಕಾರ್ಯ ವಿಭಾಗ ಮುಖ್ಯಸ್ಥ ಡಾ.ರವಿಶಂಕರ್ ಕೆ.ಉಪಸ್ಥಿತರಿದ್ದರು. ದಿವ್ಯಶ್ರೀ ಹೆಗಡೆ ನಿರೂಪಿಸಿದರು. ದರ್ಶಿನಿ ತಿಪ್ಪಾರೆಡ್ಡಿ ವಂದಿಸಿದರು.