ಜಿಲ್ಲೆ

ವಿದೇಶದಲ್ಲಿ ಕೆಲಸದ ಆಸೆಗೆ ಬಿದ್ದು 2.20 ಲಕ್ಷ ರೂ.ಕಳೆದುಕೊಂಡ ಕಾರ್ಮಿಕ: ಈಗ ಕೆಲಸವೂ ಇಲ್ಲ, ಹಣವೂ ಹೋಯ್ತು!

ಶಿವಮೊಗ್ಗ: ಫಾರಿನ್‌ನಲ್ಲಿ ಕೆಲಸ ಎಂದು ಹೇಳಿಕೊಳ್ಳುವುದೇ ಹಲವರಿಗೆ ಹೆಮ್ಮೆಯ ಸಂಗತಿ. ಇದರ ಆಸೆಗೆ ಬಿದ್ದು ಕಾರ್ಮಿಕನೋರ್ವ ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾನೆ. ಈಗ ಈತನಿಗೆ ಕುವೈತ್‌ಗೆ ಹೋಗುವ ಅವಕಾಶವೂ ಇಲ್ಲ, ಕೆಲಸವೂ ಇಲ್ಲ. ಈಗ ಕುವೈತ್ ಬದಲಿಗೆ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೆರಿದ್ದಾರೆ.

ಕುವೈತ್‌ನಲ್ಲಿ ಫ್ಲೋರ್‌ಮನ್ ಕೆಲಸದ ಆಸೆಗೆ ಬಿದ್ದ ಗಾರೆ ಕಾರ್ಮಿಕನೊಬ್ಬ ದೊಡ್ಡ ಮೊತ್ತದ ಹಣ ಕಳೆದುಕೊಂಡ ಕತೆ ಇದು. ಪದ್ಮಾ ಟಾಕೀಸ್ ಸಮೀಪದ ನಿವಾಸಿ ಕುವೈತ್ ಕೆಲಸಕ್ಕಾಗಿ ಹಣ ಕಳೆದುಕೊಂಡಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಗಾರೆ ಕಾರ್ಮಿಕನಿಗೆ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಬಂದ ಸಂದೇಶವೊಂದು ಇಷ್ಟೆಲ್ಲ ಕಾರಣವಾಗಿದೆ.

ಹೊರರಾಷ್ಟ್ರಗಳಲ್ಲಿ ಕೆಲಸಕ್ಕೆ ಅವಕಾಶವಿದೆ ಎಂಬ ಸಂದೇಶವನ್ನು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ನೋಡಿದ ಗಾರೆ ಕಾರ್ಮಿಕ ಆ ನಂಬರ್ ಕಾಲ್ ಮಾಡಿದ್ದ. ಕುವೈತ್‌ನಲ್ಲಿ ಫ್ಲೋರ್‌ಮನ್ ಕೆಲಸವಿದ್ದು ತಿಂಗಳಿಗೆ 3022 ದಿನಾರ್ (63,480 ರೂ.) ಎಂದು ತಿಳಿಸಿದ್ದ. ಐಡಿ ಕಾರ್ಡ್, ಬಿಜಿನೆಸ್ ಕಾರ್ಡ್ ಮತ್ತು ನಕಲಿ ವೀಸಾವನ್ನೂ ವಂಚಕರು ಕಳುಹಿಸಿದ್ದರು. ಇದನ್ನು ನಂಬಿದ ಗಾರೆ ಕಾರ್ಮಿಕ ಕೇಳಿದಾಗಲೆಲ್ಲ ಹಣ ಹಾಕಿದ್ದ. ಒಟ್ಟಾರೆ 16 ಬಾರಿ 2,20,005 ರೂ. ವಿವಿಧ ಖಾತೆಗಳಿಗೆ ಹಾಕಿದ್ದು ಬಳಿಕ ವಂಚಕರ ಮೊಬೈಲ್ ಸ್ವಿಚ್‌ಆಫ್ ಆದಾಗಲೇ ಮೋಸ ಹೋಗಿರುವುದು ಅರಿವಾಗಿದೆ. ಈ ಸಂಬಂಧ ಭಾನುವಾರ ಗಾರೆ ಕಾರ್ಮಿಕ ಸೈಬರ್ ಠಾಣೆಗೆ ನಾಲ್ವರ ಮೇಲೆ ದೂರು ನೀಡಿದ್ದಾರೆ.