ದಾವಣಗೆರೆ: ನ್ಯಾಮತಿ ತಾಲೂಕು ಗೋವಿನಕೋವಿ ಸಮೀಪದ ಹರಳಹಳ್ಳಿಯಲ್ಲಿ ಬುದವಾರ ನಸುಕಿನಲ್ಲಿ ಕೆಎಸ್ಸಾರ್ಟಿಸಿ ಬಸ್ ಅಪಘಾತಕ್ಕೀಡಾಗಿದೆ.
ಮೈಸೂರಿನಿಂದ ಹೊನ್ನಾಳಿ ಕಡೆಗೆ ಹೊರಟಿದ್ದ ಬಸ್, ಮಾರ್ಗಮಧ್ಯೆ ಗೋವಿನಕೋವಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದೇ ವಾರದಲ್ಲಿ 2 ಅಪಘಾತ: ನ್ಯಾಮತಿ ತಾಲೂಕಿನಲ್ಲಿ ಐದಾರು ದಿನದ ಹಿಂದೆಯೂ 2 ಖಾಸಗಿ ಬಸ್ಗಳು ಅಪಘಾತಕ್ಕೀಡಾಗಿದ್ದವು. ಸಾಲಬಾಳು-ಸುರಹೊನ್ನೆ ಗ್ರಾಮಗಳ ಮಾರ್ಗಮಧ್ಯೆ ಎರಡು ಖಾಸಗಿ ಬಸ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು. ಓವರ್ಟೇಕ್ ಮಾಡುವ ಭರದಲ್ಲಿ ಬಸ್ ಚಾಲಕರು ಮುಂದಾಗಿದ್ದರಿಂದ ಅಪಘಾತ ಸಂಭವಿಸಿತ್ತು.