ಜಿಲ್ಲೆ

ಸಂತೋಷ್​ ಡೆತ್​ನೋಟ್​ ಅನ್ನೇ ಬರೆದಿಲ್ಲ, ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಈಶ್ವರಪ್ಪ

arunakunigal

ಶಿವಮೊಗ್ಗ:ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್​ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದ್ದು, ಶಿವಮೊಗ್ಗದಲ್ಲಿ ಬುಧವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಸಚಿವ ಕೆ.ಎಸ್​. ಈಶ್ವರಪ್ಪ, ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದು ಘೋಷಿಸಿದ್ದಾರೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್​ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮತ್ತೊಂದೆಡೆ ಸಚಿವ ಈಶ್ವರಪ್ಪ ‘ತಲೆದಂಡ’ಕ್ಕೆ ಒತ್ತಡ ಹೆಚ್ಚಾಗಿದೆ. ಈ ಬೆನ್ನಲ್ಲೇ ಶಿವಮೊಗ್ಗದಲ್ಲಿ  ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ, ಸಂತೋಷ್​ ಡೆತ್​ನೋಟ್​ ಅನ್ನೇ ಬರೆದಿಲ್ಲ. ಡೆತ್​ನೋಟ್​ ಬರೆದಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಮ್ಮ ಇಲಾಖೆಯಲ್ಲಿ ಯಾವುದೇ ಕಾಮಗಾರಿ ನಡೆಯಬೇಕಾದರೆ ಕಾನೂನಾತ್ಮಕವಾಗಿ ಪ್ರಕ್ರಿಯೆ ನಡೆಯುತ್ತೆ. ವರ್ಕ್​ ಆರ್ಡರ್​ ಕೊಡದೇ ಪೇಮೆಂಟ್​ ಆಗುತ್ತಾ? ಸಂತೋಷ್​ ಅವರ ವಾಟ್ಸ್​ಆ್ಯಪ್​ನಲ್ಲಿ ನನ್ನ ಸಾವಿಗೆ ಇವರೇ ಕಾರಣ ಎಂಬ ಸಂದೇಶ ರವಾನೆ ಆಗಿದೆ. ಇದನ್ನೂ ಸಂತೋಷ್​ ಅವರೇ ಮಾಡಿದ್ದಾ? ಅದೂ ಗೊತ್ತಿಲ್ಲ ಎಂದರು.

ಕಾಂಗ್ರೆಸ್​ನವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಆತ ಡೆತ್ ನೋಟ್ ಬರೆದೇ ಇಲ್ಲ. ಆದರೂ ಡೆತ್​ನೋಟ್ ಬರೆದಿದ್ದಾನೆ ಎಂದು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ಆತನಿಗೆ ಕಾಮಗಾರಿ ಟೆಂಡರ್ ಆಗೇ ಇರಲಿಲ್ಲ ಎಂದ ಸಚಿವ ಕೆ.ಎಸ್.ಈಶ್ವರಪ್ಪ, ಇಷ್ಟು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್​ನವರಿಗೆ ಟೆಂಡರ್ ಹಾಗೂ ಬಿಲ್ ಪಾವತಿ ಬಗ್ಗೆ ಗೊತ್ತಿಲ್ಲವೇ? ಅನೇಕ ಅಭಿಮಾನಿಗಳು ಫೋನ್ ಮಾಡಿ ರಾಜೀನಾಮೆ ನೀಡಬೇಡಿ ಎನ್ನುತ್ತಿದ್ದಾರೆ. ಡಿವೈಎಸ್​ಪಿ ಗಣಪತಿ ಡೆತ್​ನೋಟ್ ಬರೆದಿಟ್ಟು ಸಹಿ ಹಾಕಿದ್ದರು. ಆದರೆ ಇದು ವಾಟ್ಸ್​ಆ್ಯಪ್​ನಲ್ಲಿ ಟೈಪ್ ಆಗಿದೆ. ಟೈಪ್ ಮಾಡಿದ್ದು ಯಾರೆಂದು ಗೊತ್ತಿಲ್ಲ. ಸಂತೋಷ್ ಪಾಟೀಲ್‌ ಮುಖವನ್ನೇ ನಾನು ನೋಡಿಲ್ಲ ಎಂದರು.

ಈಶ್ವರಪ್ಪನ ಕಡೆಯವರು ಕಮಿಷನ್ ಕೇಳಿದ್ದಾರೆ ಎಂದು ಸಂತೋಷ್ ಆರೋಪಿಸಿದ್ದ. ಆತನಿಗೆ ದೆಹಲಿ ಹೋಗಲು ಟಿಕೆಟ್ ಮಾಡಿಕೊಟ್ಟಿದ್ದು ಯಾರು? ನಮ್ಮ ಇಲಾಖೆ ಪ್ರಧಾನ ಕಾರ್ಯದರ್ಶಿ ಅತೀಕ್, ಕೇಂದ್ರ ಸಚಿವರಿಗೆ ಪತ್ರ ಬರೆದು ಸಂತೋಷ್​ಗೆ ವರ್ಕ್ ಆರ್ಡರ್ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. ಟಿವಿ ವಾಹಿನಿಯೊಂದರ ಹಾಗೂ ಸಂತೋಷ್ ಪಾಟೀಲ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದೆ. ಕೋರ್ಟ್ ಅವರಿಬ್ಬರಿಗೂ ನೋಟಿಸ್ ನೀಡಿದೆ. ಸಂತೋಷ್ ನೋಟಿಸ್​ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಕಾಂಗ್ರೆಸ್​ನವರದ್ದು ನಿರಾಧಾರ ಆರೋಪ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಸಿಎಂ ಹಾಗೂ ರಾಜ್ಯಾಧ್ಯಕ್ಷರಿಗೆ ವಿಷಯ ತಿಳಿಸಿದ್ದೇನೆ. ಈ ಷಡ್ಯಂತ್ರದ ಹಿಂದೆ ಯಾರು ಇದ್ದಾರೆ ಎಂಬುದರ ಅಮೂಲಾಗ್ರ ತನಿಖೆಯಾಗಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.