ಬೆಂಗಳೂರು: 19ನೇ ವರ್ಷದ ಚಿತ್ರಸಂತೆಗೆ ಚಾಲನೆ ಸಿಕ್ಕಿದ್ದು, ಸಾವಿರಾರು ಚಿತ್ರಗಳು ಕಲಾಭಿಮಾನಿಗಳ ಕಣ್ಮನ ಸೆಳೆಯುತ್ತಿವೆ.
ಕುಮಾರಕೃಪ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ 19ನೇ ವರ್ಷದ ಚಿತ್ರಸಂತೆಗೆ ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಚಾಲನೆ ನೀಡಿದರು. 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆ ಸ್ವಾತಂತ್ರ್ಯ ಯೋಧರಿಗೆ ಈ ಬಾರಿ ಚಿತ್ರಸಂತೆ ಸಮರ್ಪಿಸಲಾಗಿದೆ.
10 ದಿನಗಳ ಕಾಲ ನಡೆಯುವ ಚಿತ್ರಸಂತೆಗೆ 1000ಕ್ಕೂ ಹೆಚ್ಚು ಕಲಾವಿದರು ಆಗಮಿಸಿದ್ದಾರೆ. ದೇಶ್ ಬಂಧು ಗುಪ್ತ, ರಣ್ಬೀರ್ ಸಿಂಗ್, ಪೀರ್ ಅಲಿಖಾನ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು, ನಟ ಪುನೀತ್ ರಾಜ್ ಕುಮಾರ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರ ಚಿತ್ರಗಳನ್ನ ಪ್ರದರ್ಶನಕ್ಕೆ ಇಡಲಾಗಿದ್ದು, ಸಾರ್ವಜನಿಕರ ಮನ ಸೆಳೆಯುತ್ತಿವೆ. 1000ಕ್ಕೂ ಹೆಚ್ಚು ಮಳಿಗೆ ತೆರೆಯಲಾಗಿದ್ದು, ಜನಸಾಗರವೇ ಹರಿದು ಬರುತ್ತಿದೆ. ಇನ್ನು ಚಿತ್ರಸಂತೆ ಉದ್ಘಾಟಿಸಲು ಆಗಮಿಸಿದ್ದ ಸಿಎಂ ಬೊಮ್ಮಾಯಿ ಅವರು ಅಲ್ಲೇ ಐಸ್ಕ್ರೀಂ ಸವಿಯುತ್ತಾ ಕಲಾವಿದನ ಕೈಯಲ್ಲರಳಿದ ಚಿತ್ರಗಳನ್ನು ಕಣ್ತುಂಬಿಕೊಂಡರು.