ಜಿಲ್ಲೆ

RRR ವೇಗಕ್ಕೆ ಲಗಾಮು ಹಾಕಿದ ಫಿಲ್ಮ್​ ಚೇಂಬರ್​: ಶಿವಣ್ಣ ನೇತೃತ್ವದಲ್ಲಿ ಜಂಟಿ ಸುದ್ದಿಗೋಷ್ಠಿ

arunakunigal

ಬೆಂಗಳೂರು: RRR ಸಿನಿಮಾಕ್ಕಾಗಿ ಜೇಮ್ಸ್​ ಚಿತ್ರ ಎತ್ತಂಗಡಿ ಕಿಚ್ಚು ವ್ಯಾಪಿಸುತ್ತಿದ್ದಂತೆ ನಟ ಶಿವರಾಜ್​ಕುಮಾರ್​ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗುರುವಾರ ಸುದ್ದಿಗೋಷ್ಠಿ ನಡೆಸಿ ವಿವಾದಕ್ಕೆ ತೆರೆ ಎಳೆಯಲು ಯ್ನತಿಸಿದರು.

ನಟ ಶಿವರಾಜ್​ಕುಮಾರ್​ ಮಾತನಾಡಿ, ಥಿಯೇಟರ್ ಸಮಸ್ಯೆ ಬರುತ್ತೆ-ಹೋಗುತ್ತೆ. ಮಾತುಕತೆ ಕೆಲವು ‌ಸಲ‌ ಅಗ್ರಿಮೆಂಟ್​ನಲ್ಲಿ‌ ಆಗುತ್ತೆ, ಕೆಲವು ಟೈಮ್ ಮಾತಿನ ಮೇಲೆ ನಿಂತಿರುತ್ತೆ. ಡಿಸ್ಟ್ರಿಬ್ಯೂಟರ್ ಹಾಗೂ ಎಕ್ಸಿಬ್ಯೂಟರ್​ಗಳ ಮಧ್ಯೆ ಯಾವ ರೀತಿ ಮಾತುಕತೆ ಆಗಿತ್ರೋ ಗೊತ್ತಿಲ್ಲ. ಆದರೆ, ನಾನು ಎಲ್ಲರ ಪರವಾಗಿ ನಿಲ್ತೀನಿ. ಸಿನಿಮಾ ಇಂಡಸ್ಟ್ರಿ ಒಂದು ಕುಟುಂಬ ಇದ್ದಂತೆ. ಸಿಎಂ ಮಾತನಾಡಿದ್ದಾರೆ, ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ. ಅಭಿಮಾನಿಗಳು ಆತಂಕ ಪಡಬೇಡಿ. ನನ್ನ ತಮ್ಮನ‌ ಸಿನಿಮಾ ಅಂತ‌ ನಾನು ಬಂದು ಮಾತನಾಡಿಲ್ಲ. ಯಾವ ಕನ್ನಡ ಸಿನಿಮಾ ಬಂದರೂ ನಾನು ಮುಂದಾಳತ್ವ ವಹಿಸ್ತೇನೆ. ಪರಭಾಷಾ ‌ಸಿನಿಮಾ ಬರಲಿ ನಾವು ಬೇಡ ಅನ್ನಲ್ಲ, ನಮ್ಮ ಕನ್ನಡ ಚಿತ್ರಕ್ಕೆ ಅನ್ಯಾಯ ಆಗಬಾರದು ಅಷ್ಟೇ. ಕನ್ನಡ‌ ಸಿನಿಮಾಗೆ ಅನ್ಯಾಯ ಆಗದಂತೆ ಸಿಎಂ ಸಾಹೇಬ್ರು ನೋಡಿಕೊಂಡಿದ್ದಾರೆ. ಇದರಲ್ಲಿ ಯಾರದ್ದು ತಪ್ಪು ಅಂತ ಹೇಳೋದು ಬೇಡ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಸಮಸ್ಯೆ ಬಗೆಹರಿಸಬೇಕು. ಕನ್ನಡದ ಯಾವುದೇ ಸಿನಿಮಾಕ್ಕೂ ಸಮಸ್ಯೆ ಆದ್ರೂ ನಾನು ಬರ್ತೀನಿ ಎಂದರು.

ಥಿಯೇಟರ್ ಮಾಲೀಕರು ಮಾತನಾಡಿಕೊಂಡು ಜೇಮ್ಸ್ ಸಿನ್ಮಾ ಉಳಿಸಿಕೊಳ್ಳೋದಕ್ಕೆ ಮುಂದಾಗಿದ್ದಾರೆ. ಅಕ್ಕ-ಪಕ್ಕದ ಚಿತ್ರಮಂದಿರಗಳಲ್ಲಿ ಜೇಮ್ಸ್ ಸಿನಿಮಾ ಇದ್ದ ಕಡೆ, ಒಂದು ಕಡೆ ಜೇಮ್ಸ್ ಉಳಿಸಿಕೊಳ್ತೇವೆ, ಇನ್ನೊಂದು ಥಿಯೇಟರ್​ನಲ್ಲಿ RRR ಹಾಕ್ತಾರೆ. ತ್ರಿವೇಣಿ ಹಾಗೂ ಅನುಪಮಾ ಎರಡು ಥಿಯೇಟರ್​ನಲ್ಲಿ ಸಿನಿಮಾ ರನ್ ಆಗ್ತಿತ್ತು, ನಾಳೆಯಿಂದ ಅನುಪಮಾದಲ್ಲಿ RRR ಇರುತ್ತದೆ ಎಂದು ಸಾ.ರಾ. ಗೋವಿಂದು ಹೇಳಿದರು.

ಜೇಮ್ಸ್ ಸಿನಿಮಾ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮಾತನಾಡಿ, ರಾಜ್ಯದಲ್ಲಿ 8-9 ಥಿಯೇಟರ್ ಪ್ರಾಬ್ಲಮ್‌ ಇತ್ತು. ಶಿವಣ್ಣ ಹಾಗೂ ವಾಣಿಜ್ಯ ಮಂಡಳಿ ಎಂಟ್ರಿಕೊಟ್ಟಿದ್ದರಿಂದ ಸಮಸ್ಯೆ ಬಗೆಹರಿದಿದೆ. ಜೇಮ್ಸ್ ಸಿನ್ಮಾ 400 ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು. ನಾಳೆಯಿಂದ 270 ಚಿತ್ರಮಂದಿರದಲ್ಲಿ ಜೇಮ್ಸ್ ಕಂಟಿನ್ಯೂ ಆಗ್ತಿದೆ. 130 ಥಿಯೇಟರ್ ಬಿಟ್ಟುಕೊಡಬೇಕಾದ ಸಂದರ್ಭ ಬಂದಿದೆ. ಕಲೆಕ್ಷನ್ ಡೌನ್ ಇರೋ ಕಡೆ ಥಿಯೇಟರ್ ಬಿಟ್ಟುಕೊಡಲಾಗುತ್ತೆ ಎಂದರು.