ಜಿಲ್ಲೆ

ಕಾಳಿ ಮಠದ ಸ್ವಾಮೀಜಿ ಬಂಧನ: ಶ್ರೀರಂಗಪಟ್ಟಣದಲ್ಲಿ ಮತ್ತೊಮ್ಮೆ ಹನುಮ ಮಂದಿರ ಕಟ್ತೀವಿ... ನನ್ನ ಹೇಳಿಕೆಗೆ ಈಗಲೂ ಬದ್ಧ...

arunakunigal

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಹೇಳಿಕೆ ನೀಡಿ ವಿಡಿಯೋ ಹರಿಬಿಟ್ಟಿದ್ದ ಕಾಳಿ ಮಠದ ಋಷಿಕುಮಾರಸ್ವಾಮಿ ಅವರನ್ನು ಮಂಗಳವಾರ ವಶಕ್ಕೆ ಪಡೆದ ಪೊಲೀಸರು ಶ್ರೀರಂಗಪಟ್ಟಣ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಜೆಎಂಎಫ್​ಸಿ ಕೋರ್ಟ್​ಗೆ ಹಾಜರು ಪಡಿಸಿದ್ದಾರೆ.

ಪೊಲೀಸ್ ಠಾಣೆಗೆ ಕರೆತರುವ ಮುನ್ನ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ವೇಳೆ ಮಾಧ್ಯಮಗಳ ಮುಂದೆ ಮಾತನಾಡಿದ ಸ್ವಾಮೀಜಿ, ನಾನು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ನಮ್ಮಮ್ಮ ಸೂಪರ್​ ಸ್ಟಾರ್​ ಖ್ಯಾತಿಯ ಸಮನ್ವಿ ಅಸ್ಥಿ ವಿಸರ್ಜನೆ ನಿಮಿತ್ತ ಭಾನುವಾರ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದೆ. ಈ ವೇಳೆ ಅದೇ ರಸ್ತೆಯಲ್ಲಿ ನನ್ನ ಕಣ್ಣಿಗೆ ಕಾಣಿಸಿತು ಅದು ಮಸೀದಿ ಅಲ್ಲ, ನನ್ನ ಹನುಮ ದೇಗುಲ. ಅ ನನ್ನ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ಅಯೋಧ್ಯೆಯಲ್ಲಿ ರಾಮ ಮಂದಿರ. ಅದೇ ರೀತಿ ಶ್ರೀರಂಗಪಟ್ಟಣದಲ್ಲಿ ಹನುಮ ಮಂದಿರ‌ ಕಟ್ಟುತ್ತೇವೆ. ಮಸೀದಿ‌ ನನಗೆ ದೇವಾಲಯದ ರೀತಿ‌ ಕಾಣಿಸಿದೆ. ಅದನ್ನೇ ಹೇಳಿದ್ದೇನೆ. ಹಿಂದುಪರ ಸಂಘಟನೆಗಳೆಲ್ಲ ಒಂದಾಗಿರಿ, ಶ್ರೀರಂಗಪಟ್ಟಣದಲ್ಲಿ ಮತ್ತೊಮ್ಮೆ ಹನುಮ ಮಂದಿರ ಕಟ್ಟೇ ಕಟ್ಪುತ್ತೀವಿ ಎಂದರು.

ಏನಿದು ಪ್ರಕರಣ?: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ನಮ್ಮಮ್ಮ ಸೂಪರ್​ ಸ್ಟಾರ್​ ಖ್ಯಾತಿಯ ಸಮನ್ವಿ ಅಸ್ಥಿ ವಿಸರ್ಜನೆ ನಿಮಿತ್ತ ಭಾನುವಾರ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದ ಋಷಿ ಕುಮಾರಸ್ವಾಮಿ, ಮಸೀದಿ ಮುಂಭಾಗದಲ್ಲೇ ನಿಂತು ವಿವಾದಿತ ಹೇಳಿಕೆ ಉಲ್ಲೇಖಿಸಿ ವಿಡಿಯೋ ಚಿತ್ರೀಕರಣ ನಡೆಸಿ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಪ್ರಕಟಿಸಿದ್ದಾರೆ. ವಿಡಿಯೋ ವೈರಲ್​ ಆಗಿದೆ. ಈ ಹಿನ್ನೆಲೆ ಮಸೀದಿಗೆ ಭದ್ರತೆ ಹೆಚ್ಚಿಸುವ ಕುರಿತು ವಕ್ಫ್​ ಬೋರ್ಡ್​ ಸಮಿತಿ ಹಾಗೂ ಕೇಂದ್ರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್​ ಠಾಣೆಗೆ ಮನವಿ ಮಾಡಿವೆ. ಮಸೀದಿ ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ ನೀಡಿರುವ ಲಿಖಿತ ಮಾಹಿತಿ ಪ್ರಕಾರ ವಿಡಿಯೋದಲ್ಲಿ ಮಾತನಾಡಿರುವ ಋಷಿಕುಮಾರಸ್ವಾಮಿ ಹಾಗೂ ವಿಡಿಯೋ ಚಿತ್ರೀಕರಿಸಿದ ಇಬ್ಬರ ಮೇಲೂ ದೂರು ದಾಖಲಾಗಿದೆ.