ಉಡುಪಿ: ದುಬೈ ಹಾಗೂ ಅಮೆರಿಕದ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಆಸೆಯಲ್ಲಿದ್ದ ಯುವತಿಗೆ ಕೋಲಾರ ಜಿಲ್ಲೆಯ ವ್ಯಕ್ತಿಯೊಬ್ಬ ವಂಚಿಸಿದ್ದು, ಸಂಕಷ್ಟಕ್ಕೆ ಸಿಲುಕಿದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ ಕಂಪನಿಯೊಂದರಲ್ಲಿ ಕಲೆನ್ ಎಕ್ಸಿಕ್ಯೂಟಿವ್ ಆಗಿರುವ ಶಾಲಿನಿ ವಂಚನೆಗೊಳಗಾದವರು. ಶಾಲಿನಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದ ಕೋಲಾರ ಜಿಲ್ಲೆಯ ಮಾಲೂರಿನ ನಿವಾಸಿ ನಿತಿನ್ಕುಮಾರ್ ವಿರುದ್ಧ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫ್ಲೋರ್ ಮ್ಯಾನೇಜರ್ ಕೆಲಸ ಕೊಡಿಸುವುದಾಗಿ ಯುವತಿಗೆ ನಂಬಿಸಿದ ನಿತಿನ್, ಅವರಿಂದ ಹಂತ ಹಂತವಾಗಿ ಒಟ್ಟು 33.65 ಲಕ್ಷ ಹಣ ಪಡೆದು ವಂಚಿಸಿದ್ದಾನೆ. ನಿತಿನ್ ಹೇಳಿದಂತೆ ಶಾಲಿನಿ ಕುಂದಾಪುರ ಶಾಖೆಯ ಯೂನಿಯನ್ ಬ್ಯಾಂಕ್ ಖಾತೆಯಿಂದ 22,63,999 ರೂ., ಕೋರಮಂಗಲ ಶಾಖೆಯ ಎಚ್.ಡಿ.ಎಫ್.ಸಿ. ಬ್ಯಾಂಕ್ ಖಾತೆಯಿಂದ 5,85,500 ರೂ. ಹಾಗೂ ತಂದೆಯ ಎಸ್ಬಿಐ ಖಾತೆಯಿಂದ 5,16,302 ರೂ.ವನ್ನು ಆರೋಪಿಯ ಕೋರಮಂಗಲ ಶಾಖೆಯ ಎಚ್ಡಿಎಫ್ಸಿ ಬ್ಯಾಂಕ್ ಖಾತೆಗೆ ಯುಪಿಐ ಹಾಗೂ ನೆಫ್ಟ್ ಮೂಲಕ ಪಾವತಿಸಿದ್ದಾರೆ. ನಂತರ ಅರೋಪಿ ಕೆಲಸವನ್ನೂ ಕೊಡಿಸದೆ, ಹಣ ವಾಪಸ್ ಮಾಡದೆ ಮೋಸ ಎಸಗಿರುವ ಬಗ್ಗೆ ದೂರು ದಾಖಲಾಗಿದೆ.