More

    IFS​ ಅಧಿಕಾರಿ ಶ್ರೀನಿವಾಸ್​ಗೆ ಭಾವನಾತ್ಮಕ ಗೌರವ! ವೀರಪ್ಪನ್​ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿದ್ದ ಜೀಪು ಈಗ ‘ಸ್ಮಾರಕ’

    | ಗುರುಪ್ರಸಾದ್​ ತುಂಬಸೋಗೆ ಮೈಸೂರು
    ದಂತಚೋರ, ಕಾಡುಗಳ್ಳ ವೀರಪ್ಪನ್​ನಿಂದ ಹತರಾದ ‘ಕೀತಿರ್ಚಕ್ರ’ ಐಎಫ್​ಎಸ್​ ಅಧಿಕಾರಿ ಪಿ.ಶ್ರೀನಿವಾಸ್​ ಅವರು ಬಳಸುತ್ತಿದ್ದ ಜೀಪ್​ ಅನ್ನು ಅರಣ್ಯ ಇಲಾಖೆ ಸಂರಕ್ಷಣೆ ಮಾಡುವ ಮೂಲಕ ಅವರ ನೆನಪನ್ನು ಚಿರಾಯು ಮಾಡಲಾಗಿದ್ದು, ಭಾವನಾತ್ಮಕವಾಗಿ ಅಧಿಕಾರಿಗೆ ಗೌರವ ಸಲ್ಲಿಸಿದೆ.

    ವೀರಪ್ಪನ್​ ವಿರುದ್ಧದ ಕಾರ್ಯಾಚರಣೆಗೆ ಬಳಸಲಾಗುತ್ತಿದ್ದ ಜೀಪ್​ ಅನ್ನು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದಲ್ಲಿರುವ ಮಲೆಮಹದೇಶ್ವರ ವನ್ಯಜಿವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಸಂರಕ್ಷಿಸಿ ಇಡಲಾಗಿದೆ. ಮಲೆಮಹದೇಶ್ವರ ವನ್ಯಜಿವಿಧಾಮದ ಡಿಸಿಎಫ್​ ಏಡುಕೊಂಡಲು ಮತ್ತು ವನ್ಯಜಿವಿ ಮಾರ್ಗದರ್ಶಕ ಜಿ.ಎಸ್​. ಸೋಮಶೇಖರ್​ ಅವರ ಆಸಕ್ತಿಯೇ ಇದಕ್ಕೆ ಕಾರಣ. ವೀರಪ್ಪನ್​ ಉಪಟಳದ ಕಾಲದಲ್ಲಿ (1990-91) ಐಎಫ್​ಎಸ್​ ಅಧಿಕಾರಿ ಶ್ರೀನಿವಾಸ್​ ಡಿಎಫ್ಒ ಆಗಿ ನಿಯೋಜನೆಗೊಂಡರು. ಆಗ ವೀರಪ್ಪನ್​ ವಿರುದ್ಧದ ವಿಶೇಷ ಕಾರ್ಯಪಡೆ (ಎಸ್​ಟಿಎಫ್​)ಗೆ ಸರ್ಕಾರ ಮೂರು ಜೀಪುಗಳನ್ನು (ಕೆ.ಎ.10-ಜಿ 1, ಕೆ.ಎ.10-ಜಿ 2 ಮತ್ತು ಕೆ.ಎ.10- ಜಿ 3) ನೀಡಿತ್ತು. ಈ ಜೀಪ್​ಗಳನ್ನು ಶ್ರೀನಿವಾಸ್​ ಅವರ ಅವಧಿಯಲ್ಲಿ ಹಲವು ಕಾರ್ಯಾಚರಣೆಗೆ ಬಳಸಿದ್ದರು. ಅಲ್ಲದೆ, ವೀರಪ್ಪನ್​ ಹುಟ್ಟೂರು ಗೋಪಿನಾಥಂನಲ್ಲಿ ಆರೋಗ್ಯ ಶಿಬಿರ ಮುಂತಾದ ಚಟುವಟಿಕೆಗಳನ್ನು ಮಾಡುತ್ತಿದ್ದ ಶ್ರೀನಿವಾಸ್​ ಅವರು, ಸ್ಥಳೀಯ ಜನರನ್ನು ಆಸ್ಪತ್ರೆಗೆ ಸಾಗಿಸಲು ಈ ಜೀಪುಗಳನ್ನು ಆಂಬುಲೆನ್ಸ್​ ಮಾದರಿಯಲ್ಲಿ ಬಳಸುತ್ತಿದ್ದರು.
    1991ರ ನವೆಂಬರ್​ 10ರಂದು ವೀರಪ್ಪನ್​ನಿಂದ ಶ್ರೀನಿವಾಸ್​ ಹತರಾದರು. ನಂತರದ ದಿನಗಳಲ್ಲಿ ಈ ಜೀಪುಗಳ ಪೈಕಿ ಒಂದನ್ನು (ಜಿ-1) ಪಾಲಾರ್​ ಅರಣ್ಯ ವ್ಯಾಪ್ತಿಯ ಶೆಡ್​ನಲ್ಲಿ ನಿಲ್ಲಿಸಲಾಗಿತ್ತು. ಇನ್ನೊಂದನ್ನು (ಜಿ-2) ಹಲವು ವರ್ಷಗಳ ಹಿಂದೆಯೇ ಗುಜರಿಗೆ ಹಾಕಲಾಯಿತು. ಮತ್ತೊಂದು ಜೀಪು (ಜಿ-3) ಮಾಜಿ ಸಚಿವ ಎಚ್​.ನಾಗಪ್ಪ ಅವರು ವೀರಪ್ಪನ್​ನಿಂದ ಹತ್ಯೇಗಿಡಾದ ಸಂದರ್ಭದಲ್ಲಿ ಜನರ ಕೋಪಕ್ಕೆ ತುತ್ತಾಯಿತು.

    ಭಾವನಾತ್ಮಕವಾಗಿ ಗಮನ ಸೆಳೆಯುತ್ತಿದೆ ವಾಹನ: ಪಾಲಾರ್​ ಅರಣ್ಯ ವ್ಯಾಪ್ತಿಯ ಶೆಡ್​ನಲ್ಲಿ ಅನಾಥವಾಗಿದ್ದ ನಿಂತಿದ್ದ ಜೀಪ್​ಗೆ (ಜಿ-1) ಡಿಸಿಎಫ್​ ಏಡುಕೊಂಡಲು ಮತ್ತು ವನ್ಯಜಿವಿ ಮಾರ್ಗದರ್ಶಕ ಜಿ.ಎಸ್​.ಸೋಮಶೇಖರ್​ ಮರುಜೀವ ಕೊಟ್ಟಿದ್ದಾರೆ. ಕೆಲಸಕ್ಕೆ ಬಾರದ ಸರ್ಕಾರಿ ವಾಹನಗಳನ್ನು ಸ್ಕ್ರಾಪ್​ (ಗುಜರಿ)ಗೆ ಹಾಕುವುದು ವಾಡಿಕೆ. ಆದರೆ ಶ್ರೀನಿವಾಸ್​ ಅವರ ಜೀಪ್​ ವಿಷಯದಲ್ಲಿ ಅಧಿಕಾರಿಗಳು ಆ ಕೆಲಸಕ್ಕೆ ಕೈ ಹಾಕದೆ, ಮರುಜೀವ ಕೊಟ್ಟಿದ್ದಾರೆ. ಇದಕ್ಕಾಗಿ ಏಡುಕೊಂಡಲು ಮತ್ತು ಸೋಮಶೇಖರ್​ ಸತತ ಶ್ರಮ ವಹಿಸಿದ್ದಾರೆ.

    IFS​ ಅಧಿಕಾರಿ ಶ್ರೀನಿವಾಸ್​ಗೆ ಭಾವನಾತ್ಮಕ ಗೌರವ! ವೀರಪ್ಪನ್​ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿದ್ದ ಜೀಪು ಈಗ 'ಸ್ಮಾರಕ'

    ತಿಂಗಳ ಹಿಂದೆ ಮೈಸೂರಿನಿಂದ ಮೆಕ್ಯಾನಿಕ್​ ಕರೆದುಕೊಂಡು ಹೋಗಿ ಪಾಲಾರ್​ನಿಂದ ಜೀಪನ್ನು ಟೋ ಮಾಡಿಕೊಂಡು ತರಲಾಗಿದೆ. ನಂತರ ಮೈಸೂರು ವ್ಯಾಪ್ತಿಯ ಗ್ಯಾರೇಜ್​ನಲ್ಲಿ ರಿಪೇರಿ ಕೆಲಸ ಪ್ರಾರಂಭಿಸಿ, ಅದರ ಮೇಲು ಹೊದಿಕೆಯಿಂದ ಹಿಡಿದು ತುಕ್ಕು ಹಿಡಿದು ಹಳತಾಗಿದ್ದ ಎಲ್ಲ ಭಾಗಗಳನ್ನು ಬದಲಿಸಲಾಗಿದೆ. ಇಲಾಖೆಯ ಜೀಪ್​ ಮಾದರಿಯಲ್ಲೇ ಪೇಂಟಿಂಗ್​ ಮಾಡಿಸಿ, ಹೊಸ ಚಕ್ರ ಅಳವಡಿಸಿ ಬಳಕೆಗೆ ಯೋಗ್ಯವಾಗುವಂತೆ ಮಾಡಿದ್ದಾರೆ. ಬಳಿಕ ಕೊಳ್ಳೇಗಾಲಕ್ಕೆ ಚಾಲನೆ ಮಾಡಿಕೊಂಡು ಹೋಗಲಾಗಿದೆ.

    ಕೆಟ್ಟು ಮೂಲೆ ಸೇರಿದ್ದ ಜೀಪ್​ ಈಗ ಡಿಸಿಎಫ್​ ಕಚೇರಿ ಆವರಣದಲ್ಲಿ ಶೋರೂಂನ ವಾಹನದಂತೆ ಕಂಗೊಳಿಸುತ್ತಿದೆ. ಅದನ್ನು ಬಳಸದೆ ಹಾಗೆಯೇ ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ಅದಕ್ಕೊಂದು ವಿನೂತನ ಶೈಲಿಯ ಶೆಡ್​ ನಿರ್ಮಿಸಿ ಪ್ರದರ್ಶನಕ್ಕೆ ಇಡಲಾಗಿದೆ.

    IFS​ ಅಧಿಕಾರಿ ಶ್ರೀನಿವಾಸ್​ಗೆ ಭಾವನಾತ್ಮಕ ಗೌರವ! ವೀರಪ್ಪನ್​ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿದ್ದ ಜೀಪು ಈಗ 'ಸ್ಮಾರಕ'

    ಐಎಫ್​ಎಫ್​ ಅಧಿಕಾರಿ ಶ್ರೀನಿವಾಸ್​ ಯಾರು?: ಮೂಲತಃ ಆಂಧ್ರಪ್ರದೇಶದವರಾದ ಐಎಫ್​ಎಸ್​ ಅಧಿಕಾರಿ ಶ್ರೀನಿವಾಸ್​ ವೀರಪ್ಪನ್​ ವಿರುದ್ಧದ ಕಾರ್ಯಾಚರಣೆಗೆ ನೇಮಕಗೊಂಡಿದ್ದರು. ವೀರಪ್ಪನ್​ ಸೆರೆ ಸಲುವಾಗಿ ಆತನ ಹುಟ್ಟೂರು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೋಪಿನಾಥಂನಲ್ಲಿ ಹಲವು ಜನಪರ ಕೆಲಸಗಳನ್ನು ಮಾಡಿದ್ದರು. ಪರಿಣಾಮ, ವೀರಪ್ಪನ್​ನ ಹಲವು ಸಹಚರರು ಶರಣಾಗತರಾದರು. ಕೊನೆಗೆ ಒಂದು ದಿನ ವೀರಪ್ಪನ್​ ಶರಣಾಗತಿಯ ನಾಟಕವಾಡಿ, ಶ್ರೀನಿವಾಸ್​ ಅವರನ್ನು ಕರೆಸಿಕೊಂಡು ಭೀಕರವಾಗಿ ಹತ್ಯೆ ಮಾಡಿದ್ದನು.

    ಗೋಪಿನಾಥಂನಲ್ಲಿ ಪಾಳು ಬಿದ್ದಿದ್ದ ಶ್ರೀ ಶಕ್ತಿ ಮಾರಿಯಮ್ಮ ದೇವಾಲಯವನ್ನು ಶ್ರೀನಿವಾಸ್​ ಅವರೇ ಕಟ್ಟಿದ್ದ ನೆನಪಿಗಾಗಿ ಸ್ಥಳೀಯರು ಇಂದಿಗೂ ದೇವಿಯ ಫೋಟೋ ಜತೆಗೆ ಅವರ ಫೋಟೋಗೂ ಪೂಜೆ ಸಲ್ಲಿಸುತ್ತಿದ್ದಾರೆ.

    ಅರಣ್ಯ ಇಲಾಖೆಗೆ ಸ್ಮರಣೀಯ ಸೇವೆ ಸಲ್ಲಿಸಿ ಹುತಾತ್ಮರಾದ ಶ್ರೀನಿವಾಸ್​ ಅವರ ನೆನಪು ಉಳಿಯಲಿ ಎಂಬ ಕಾರಣಕ್ಕೆ ಅವರು ಬಳಸುತ್ತಿದ್ದ ಜೀಪ್​ ಅನ್ನು ಕೊಳ್ಳೇಗಾಲದ ಕಚೇರಿ ಆವರಣದಲ್ಲಿ ಸಂರಕ್ಷಿಸಲಾಗಿದೆ.
    | ಏಡುಕೊಂಡಲು ಡಿಸಿಎಫ್​ ಮಲೆಮಹದೇಶ್ವರ ವನ್ಯಜಿವಿಧಾಮ

    ಪತ್ನಿಯ ಕೊಲೆ ಕೇಸ್​ನಲ್ಲಿ ಗಂಡನಿಗೆ ಜೈಲುಶಿಕ್ಷೆ, ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ! ದುಡುಕಿಬಿಟ್ಟ ಮಾವ…

    ಇಡೀ ರಾತ್ರಿ ಗಂಡನ ಶವದ ಪಕ್ಕ ಮಲಗಿ ಹೈಡ್ರಾಮ… ಒಳ ಉಡುಪಲ್ಲಿ ಪತ್ನಿ ಬಚ್ಚಿಟ್ಟುಕೊಂಡ ಮಾಂಗಲ್ಯದ ಹಿಂದಿತ್ತು ಸ್ಫೋಟಕ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts