ಜಿಲ್ಲೆ

ಹೊಸಕೋಟೆ ನಗರಸಭೆ ಕಚೇರಿಯಲ್ಲಿ ಪೌರ ಕಾರ್ಮಿಕರ ಸಂಭ್ರಮ: ಸಿಹಿ ತಿನ್ನಿಸಿ ಶುಭಕೋರಿದ ಎಂಟಿಬಿ ನಾಗರಾಜ್​

ಬೆಂಗಳೂರು ಗ್ರಾಮಾಂತರ: ಪ್ರತಿದಿನ ಸಮವಸ್ತ್ರ ಧರಿಸಿ ಶಿಸ್ತಿನ ಸಿಪಾಯಿಗಳಂತೆ ಬೆವರು ಸುರಿಸಿ ಸ್ವಚ್ಛತಾ ಕೆಲಸದಲ್ಲಿ ತೊಡಗುವ ಪೌರ ಕಾರ್ಮಿಕರು ಶುಕ್ರವಾರ ಹೋಸಕೋಟೆಯಲ್ಲು 'ಪೌರ ಕಾರ್ಮಿಕರ ದಿನಾಚರಣೆ' ಅಂಗವಾಗಿ ಬಣ್ಣಬಣ್ಣದ ಉಡುಗೆ ತೊಟ್ಟು ಸಂಭ್ರಮಿಸಿದರು.

ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಹೊಸಕೋಟೆ ನಗರಸಭೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು. ಕಚೇರಿ ಆವರಣದಲ್ಲಿ ರಂಗೋಲಿ ಬಿಡಿಸಿ ಹಬ್ಬದ ವಾತಾವರಣ ಮೂಡಿಸಲಾಗಿತ್ತು. ಪೌರ ಕಾರ್ಮಿಕರ ದಿನಾಚರಣೆಗೆ ಶುಭಾಶಯಗಳು ಎಂಬ ಬರಹದ ದೊಡ್ಡ ಬ್ಯಾನರ್ ತೂಗುಹಾಕಿ ಶುಭಕೋರಲಾಯಿತು. ಬೆಳಗ್ಗೆ 8ಕ್ಕೆ ನಗರಸಭೆ ಕಾರ್ಯಾಲಯದಲ್ಲಿ ಹಾಜರಿದ್ದ 180ಕ್ಕೂ ಹೆಚ್ಚು ಪೌರಕಾರ್ಮಿಕರು ಕಾಯಂ ಆದೇಶದ ಬಗ್ಗೆ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡರು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಮಂಗಳವಾದ್ಯಗಳ ಮೂಲಕ ಸ್ವಾಗತ ಕೋರಲಾಯಿತು. ಸಚಿವರು ಪೌರಕಾರ್ಮಿಕರ ಮೇಲೆ ಹೂ ಎರಚುವ ಮೂಲಕ ಶುಭಕೋರಿದರು. ಪೌರಕಾರ್ಮಿಕರಿಗೆ ಸಿಹಿ ತಿನಿಸಿ ಸಚಿವರು ಶುಭ ಕೋರಿದರು. ಪೌರಕಾರ್ಮಿಕರು ಕೂಡ ಸಚಿವರಿಗೆ ಸಿಹಿ ತಿನಿಸಿ ಸಂತಸದಲ್ಲಿ ಭಾಗಿಯಾದರು.

ಕಂಬಳಿ ವಿತರಣೆ: ಸಚಿವ ಎಂಟಿಬಿ ನಾಗರಾಜ್ ಎಲ್ಲ ಪೌರಕಾರ್ಮಿಕರಿಗೆ ಕಂಬಳಿಗಳನ್ನು ಉಡುಗೊರೆಯಾಗಿ ನೀಡಿದರು. ಮಧ್ಯಾಹ್ನ ನಗರಸಭೆ ಕಾರ್ಯಾಲಯದ ಸಮೀಪದ ಕಲ್ಯಾಣಮಂಟಪದಲ್ಲಿ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು, ಪೌರ ಕಾರ್ಮಿಕರೊಂದಿಗೆ ಕುಳಿತು ಅಧಿಕಾರಿಗಳು ಊಟ ಮಾಡಿದರು. ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ, ವಿವಿಧ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಗರಸಭೆ ಪೌರಾಯುಕ್ತ ಪ್ರಸಾದ್ ಹಾಗೂ ನಗರಸಭೆ ಅಧ್ಯಕ್ಷ ಡಿ.ಕೆ.ನಾಗರಾಜ್ ಗಣೇಶ ವಿಗ್ರಹವನ್ನು ಸಚಿವರಿಗೆ ನೆನಪಿನ ಕಾಣಿಕೆಯಾಗಿ ನೀಡಿ ಸನ್ಮಾನಿಸಿದರು.

ಅಬಕಾರಿಯನ್ನು ನಯವಾಗಿಯೇ ತಿರಸ್ಕರಿಸಿದ್ದೆ! : ಸಚಿವನಾಗಿ ನೇಮಕವಾದ ಬಳಿಕ ಸರ್ಕಾರ ನನಗೆ ಮೊದಲಿಗೆ ಅಬಕಾರಿ ಖಾತೆ ನೀಡಿತ್ತು. ಈ ಖಾತೆಯಿಂದ ಬಡವರ ಸೇವೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅದನ್ನು ನಯವಾಗಿಯೇ ತಿರಸ್ಕರಿಸಿದ್ದೆ, ಖಾತೆ ಕೊಡುವುದಾದರೆ ಜನಸೇವೆಗೆ ಅವಕಾಶವಿರುವ ಖಾತೆಯನ್ನೇ ನೀಡಬೇಕು ಎಂದು ಮನವಿ ಮಾಡಿದ್ದೆ ಎಂದು ಸಚಿವ ಎಂಟಿಬಿ ಹೇಳಿದರು.

ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಸಚಿವರು, ಬಿಜೆಪಿ ಸರ್ಕಾರ ನನ್ನ ಪ್ರಾಮಾಣಿಕ ಬೇಡಿಕೆಯನ್ನು ಪರಿಗಣಿಸಿ ಪೌರಾಡಳಿತ ಖಾತೆಯನ್ನು ನೀಡಿತ್ತು. ಈ ಖಾತೆ ಪಡೆದ ಬಳಿಕ ಪೌರ ಕಾರ್ಮಿಕರ ಕಲ್ಯಾಣಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಅಭಿಲಾಷೆ ಮೊಳೆಕೆಯೊಡೆದಿತ್ತು. ಇದನ್ನು ಸಚಿವ ಸಹದ್ಯೋಗಿಗಳೊಂದಿಗೆ ಚರ್ಚೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ ಇದಕ್ಕೆ ಮನ್ನಣೆ ನೀಡಿ ದೊಡ್ಡ ಉಡುಗೊರೆಯನ್ನೇ ನೀಡಿದೆ. ಈ ಖಾತೆ ನಿರ್ವಹಿಸಿದ್ದಕ್ಕೆ ನನಗೆ ಆತ್ಮತೃಪ್ತಿ ಇದೆ ಎಂದು ಎಂಟಿಬಿ ನಾಗರಾಜ್ ಹೇಳಿದರು.