ಜಿಲ್ಲೆ

ರಮೇಶ್​ ಜಾರಕಿಹೊಳಿ CD ಕೇಸ್: ಸರ್ಕಾರ- ಎಸ್​ಐಟಿ ಕ್ರಮಕ್ಕೆ ಹೈಕೋರ್ಟ್​ ಬೇಸರ

arunakunigal

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗೆ ಈವರೆಗೂ ಲಿಖಿತ ವಾದ ಹಾಗೂ ದಿನಾಂಕಸಹಿತ ಸಂಕ್ಷಿಪ್ತ ಸಾರಾಂಶ (ಸಿನಾಪ್ಸಿಸ್​) ಸಲ್ಲಿಸದ ಸರ್ಕಾರ ಹಾಗೂ ಎಸ್​ಐಟಿ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್​, 10 ದಿನದೊಳಗೆ ಎಲ್ಲರೂ ಲಿಖಿತ ವಾದ ಸಲ್ಲಿಸಬೇಕು ಎಂದು ತಾಕೀತು ಮಾಡಿದೆ.

ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ ಪ್ರಶ್ನಿಸಿ ಹಾಗೂ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ರಮೇಶ್​ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್​ಮೇಲ್​ ಪ್ರಕರಣದ ಎಫ್​ಐಆರ್​ ರದ್ದು ಕೋರಿ ಸಂತ್ರಸ್ತೆ ಮತ್ತಿಬ್ಬರು ಆರೋಪಿಗಳಾದ ಎಸ್​. ಶ್ರವಣ್​ ಕುಮಾರ್​ ಹಾಗೂ ಬಿ.ಎಂ. ನರೇಶ್​ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್​. ಸುನೀಲ್​ ದತ್​ ಯಾದವ್​ ಅವರಿದ್ದ ಪೀಠ ಸೋಮವಾರ ವಿಚಾರಣೆ ನಡೆಸಿತು.

ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಹಾಜರಾಗಿ, ಪ್ರಕರಣದ ಬೆಳವಣಿಗೆಗಳ ಕುರಿತ ಸಿನಾಪ್ಸಿಸ್​ ಹಾಗೂ ಅರ್ಜಿ ಸಂಬಂಧ ಮಂಡಿಸಲಿರುವ ಕಾನೂನಾತ್ಮಕ ಅಂಶಗಳ ಲಿಖಿತ ವಾದ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅದನ್ನು ಎರಡೂ ಪಕ್ಷದವರು ಪರಸ್ಪರ ಹಂಚಿಕೊಳ್ಳಬೇಕು ಎಂದು ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನಿರ್ದೇಶಿಸಿತ್ತು. ಆದರೆ ಸರ್ಕಾರ, ಎಸ್​ಐಟಿ ಮತ್ತು ರಮೇಶ್​ ಜಾರಕಿಹೊಳಿ ಸೇರಿ ಪ್ರತಿವಾದಿಗಳು ಈವರೆಗೆ ಲಿಖಿತ ವಾದ ಸಲ್ಲಿಸಿಲ್ಲ. ಇದಕ್ಕೆ ಬೇಸರ ವ್ಯಕ್ತಪಡಿಸಿದ ಪೀಠ, ಮತ್ತೆ 10 ದಿನ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗೆ ಯಾವುದೇ ವಿಳಂಬವಿಲ್ಲದೆ ಲಿಖಿತ ವಾದ ಸಲ್ಲಿಸಬೇಕು ಎಂದು ತಾಕೀತು ಮಾಡಿತು.

ವಾದ-ಪ್ರತಿವಾದ ಆಲಿಸುವುದಿಲ್ಲ: ಎಲ್ಲರೂ ಲಿಖಿತ ವಾದ ಸಲ್ಲಿಸದ ಹೊರತು ವಾದ&ಪ್ರತಿವಾದ ಆಲಿಸುವುದಿಲ್ಲ. ಲಿಖಿತ ವಾದ ಸಲ್ಲಿಸುವುದರಿಂದ ಯಾರು ಯಾವೆಲ್ಲ ಕಾನೂನಾತ್ಮಕ ಅಂಶದ ಮೇಲೆ ವಾದ ಮಂಡಿಸಲಿದ್ದಾರೆ ಎನ್ನುವುದು ತಿಳಿಯಲಿದ್ದು, ಇದರಿಂದ, ಸುದೀರ್ಘವಾಗಿ ವಾದ ಮಂಡಿಸುವುದನ್ನು ತಪ್ಪಿಸಬಹುದು. ವಾದ ಮಂಡನೆಗೆ ಸಮಯದ ಮಿತಿ ನಿಗದಿಪಡಿಸಬಹುದು ಎಂದು ಅಭಿಪ್ರಾಯಪಟ್ಟ ಪೀಠ, ವಿಚಾರಣೆಯನ್ನು ದಸರಾ ರಜೆಯ ನಂತರಕ್ಕೆ ಮುಂದೂಡಿತು.