ಜಿಲ್ಲೆ

ಆಸೆ ಪಡುವುದರಲ್ಲಿ ತಪ್ಪಿಲ್ಲ... ಎನ್ನುತ್ತಲೇ ಡಿಕೆಶಿಗೆ ಸವಾಲು ಹಾಕಿದ ಎಚ್​ಡಿಕೆ

arunakunigal

ರಾಮನಗರ: ಸುಮ್ಮನೆ ನಾನು ಸಿಎಂ ಸಿಎಂ ಅಂದ್ರೆ ಸಾಲದು, ಡಿ.ಕೆ. ಶಿವಕುಮಾರ್ ಆ ರೀತಿಯಲ್ಲಿ ಆಸೆ ಪಡುವುದು ತಪ್ಪಲ್ಲ, ಅವರು ಮುಖ್ಯಮಂತ್ರಿ ಆದರೆ ಹೇಗೆ ಅಭಿವೃದ್ಧಿ ಮಾಡುತ್ತೇವೆ? ಹಿಂದೆ ಏನು ಮಾಡಿದ್ದೇನೆ? ಅನ್ನೋದನ್ನು ಜನರ ಮುಂದೆ ಹೇಳಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಗೌಡರ ವಿರುದ್ಧ ಸೋತಿಲ್ಲವೇ?: ಕುಮಾರಸ್ವಾಮಿ ಅವರನ್ನೇ ಸೋಲಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದರು. ಇದಕ್ಕೆ ಗರಂ ಆದ ಎಚ್​ಡಿಕೆ, ದೇವೇಗೌಡರ ವಿರುದ್ಧ ಡಿಕೆಶಿ ಎರಡು ಬಾರಿ ಸೋತಿದ್ದಾರೆ. ಇದನ್ನು ಇವರು ಮರೆಯಬಾರದು. ನಾನು ಡಿಕೆಶಿ ವಿರುದ್ಧ ಸೋತಾಗ ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದೆ. ಇವರು ಚುನಾವಣೆ ಗೆದ್ದು ಬಂದಿರುವ ಇತಿಹಾಸ ನಮಗೂ ಗೊತ್ತು. ಯಾವ ರೀತಿಯಲ್ಲಿ ಚುನಾವಣೆ ಗೆದ್ದಿದ್ದಾರೆಂದು ಗೊತ್ತಿಲ್ವಾ? ಇವರ ಎಲೆಕ್ಷನ್ ಕುರಿತು ದೊಡ್ಡ ಕಥೆ-ಪುಸ್ತಕವನ್ನೇ ಬರೆಯಬಹುದು. ನಾನು ಕೂಡ ನಾಲ್ಕು ಬಾರಿ ಶಾಸಕ ಮತ್ತು ಎರಡು ಬಾರಿ ಸಂಸದನಾಗಿದ್ದೇನೆ ಎನ್ನುವುದನ್ನು ಮರೆಯಬಾರದು ಎಂದು ಮಾತಿನಲ್ಲೇ ತಿವಿದಿದ್ದಾರೆ.

ಡಿ.ಕೆ. ಶಿವಕುಮಾರ್ ಯಾವ ಟ್ರಂಪ್ ಕಾರ್ಡ್ ಆದರೂ ಬಳಸಲಿ, ಅಂತಿಮವಾಗಿ ಮತದಾರರು ತೀರ್ಮಾನ ಮಾಡುತ್ತಾರೆ. ತಾನೂ ಸಿಎಂ ಆಗಬೇಕೆಂದು ಡಿ.ಕೆ. ಶಿವಕುಮಾರ್ ಆಸೆ ಪಡುವುದು ತಪ್ಪಲ್ಲ ಎಂದು ಕುಮಾರಸ್ವಾಮಿ ಹೇಳಿದರು.